ಉಡುಪಿ : ಕುಂದಾಪುರ ತಾಲೂಕಿನ ಬೆಳ್ಳಾಲ ಎಂಬಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ಯುವಕನೋರ್ವನನ್ನು ಮನೆಗೆ ಕರೆಸಿಕೊಂಡ ಯುವತಿಯ ಕುಟುಂಬಸ್ಥರು ಆತನನ್ನು ಮರಕ್ಕೆ ಕಟ್ಟಿಹಾಕಿ ಪೈಶಾಚಿಕವಾಗಿ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಯುವಕನನ್ನು ಸನತ್ ಎಂದು ಗುರುತಿಸಲಾಗಿದ್ದು, ಈತ ಮತ್ತು ಯುವತಿ ಒಂದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಗ ಪರಿಚಯವಾಗಿ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ಯುವತಿಯು ಸನತ್ನಿಂದ ₹50,000 ಸಾಲ ಪಡೆದುಕೊಂಡಿದ್ದಳು. ಆದರೆ ಹಣ ಪಡೆದ ಬಳಿಕ ಕೆಲಸ ತೊರೆದ ಆಕೆ, ಆತನ ಫೋನ್ ಕರೆಗಳನ್ನು ಸ್ವೀಕರಿಸದೆ ಸತಾಯಿಸುತ್ತಿದ್ದಳು. ಸಾಲದ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದಾಗ ಮನೆಗೆ ಬರುವಂತೆ ತಿಳಿಸಿದ್ದಳು.
ಯುವತಿಯ ಕರೆಯಂತೆ ಆಕೆಯ ಮನೆಗೆ ತೆರಳಿದ್ದ ಸನತ್ ಮೇಲೆ ಯುವತಿಯ ಕಡೆಯವರು ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಅಲ್ಲದೆ, ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಸುಳ್ಳು ದೂರು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ದೌರ್ಜನ್ಯದ ವಿರುದ್ಧ ಸನತ್ ಸಹ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪರಸ್ಪರ ದೂರು-ಪ್ರತಿದೂರುಗಳು ದಾಖಲಾಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಆರೋಪದಡಿ ಸನತ್ನನ್ನು ಹಾಗೂ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ರಾಮ ಕುಮಾರ್ ಮತ್ತು ನಂದೀಶ್ ಕುಮಾರ್ ಎಂಬವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು










