ಬೆಂಗಳೂರು: ಉದ್ಯಮಿ ಹಾಗೂ ರಾಜಕಾರಣಿ ನಲಪಾಡ್ ಅವರ ಆರತಕ್ಷತೆ ಸಮಾರಂಭಕ್ಕೆ ಸ್ಯಾಂಡಲ್ವುಡ್ನ ಖ್ಯಾತ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರೊಂದಿಗೆ ಆಗಮಿಸಿದ್ದರು. ಸಮಾರಂಭದಲ್ಲಿ ಸುದೀಪ್ ಅವರ ಗಾಯನದ ಕ್ಷಣವೊಂದು ಅತಿಥಿಗಳು ಹಾಗೂ ಅಭಿಮಾನಿಗಳ ಗಮನ ಸೆಳೆಯಿತು.
ಕಾರ್ಯಕ್ರಮದ ವೇಳೆ ಸುದೀಪ್ ಅವರಿಗೆ ಹಾಡೊಂದನ್ನು ಹಾಡುವಂತೆ ಸ್ನೇಹಿತರು ಹಾಗೂ ಅತಿಥಿಗಳಿಂದ ಒತ್ತಾಯ ಕೇಳಿಬಂದಿತು. ಮನವಿಗೆ ಸ್ಪಂದಿಸಿದ ಅವರು ವೇದಿಕೆಯಲ್ಲಿದ್ದ ಪತ್ನಿ ಪ್ರಿಯಾ ಅವರನ್ನು ಉದ್ದೇಶಿಸಿ ಮಲಯಾಳಂನ ಜನಪ್ರಿಯ ‘ಕಾಂತಾ ನಾನಂವರಾ’ ಹಾಡನ್ನು ಹಾಡಿ ಸಂಭ್ರಮಿಸಿದರು.
ಪ್ರಿಯಾ ಸುದೀಪ್ ಅವರು ಮಲಯಾಳಿ ಕುಟುಂಬದ ಹಿನ್ನೆಲೆಯವರಾಗಿರುವುದರಿಂದ ಈ ಹಾಡಿಗೆ ಸುದೀಪ್ ಅವರಲ್ಲಿ ವಿಶೇಷ ಅಭಿಮಾನವಿದೆ ಎನ್ನಲಾಗಿದೆ. ಪತ್ನಿಗಾಗಿ ಈ ಹಾಡನ್ನು ಹಲವು ಸಂದರ್ಭಗಳಲ್ಲಿ ಹಾಡಿರುವ ಕಿಚ್ಚ, ಇದೀಗ ನಲಪಾಡ್ ಅವರ ಆರತಕ್ಷತೆಯಲ್ಲೂ ಅದೇ ಹಾಡಿನ ಮೂಲಕ ವಿಶೇಷ ಕ್ಷಣವೊಂದನ್ನು ಸೃಷ್ಟಿಸಿದರು.
ಮಲಯಾಳಂನ ಫೋಕ್-ಫ್ಯೂಷನ್ ಶೈಲಿಯ ‘ಕಾಂತಾ ನಾನಂವರಾ’ ಹಾಡನ್ನು ಸುದೀಪ್ ಈ ಹಿಂದೆ ಕೂಡ ರಿಯಾಲಿಟಿ ಶೋ ವೇದಿಕೆಯಲ್ಲಿ ಹಾಡಿದ್ದರು. ಮಲಯಾಳಂನಲ್ಲಿ ಜನಪ್ರಿಯವಾಗಿದ್ದ ಈ ಗೀತೆಗೆ ಕನ್ನಡಿಗರಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸುದೀಪ್ ಅವರ ಗಾಯನದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.
ಆರತಕ್ಷತೆ ಸಮಾರಂಭದಲ್ಲಿ ಸುದೀಪ್ ಹಾಡಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋ ನೋಡಿದ ಅಭಿಮಾನಿಗಳು ಕಿಚ್ಚನ ಗಾಯನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪತ್ನಿಗಾಗಿ ಸುದೀಪ್ ಹಾಡಿದ ವಿಶೇಷ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ರಾಜ್ಯ ಸುದ್ದಿಗಳು









