ಮಂಗಳೂರು : ನಗರದ ಶೈಕ್ಷಣಿಕ ವಾತಾವರಣವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಹಾಗೂ ವಿವಿಧ ಕಾಲೇಜುಗಳು ಜಂಟಿಯಾಗಿ ಕೈಗೊಂಡಿರುವ ‘ಡ್ರಗ್ಸ್ ಮುಕ್ತ ಕ್ಯಾಂಪಸ್’ ವಿನೂತನ ಕಾರ್ಯಾಚರಣೆಗೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆಶಾದಾಯಕ ಫಲಿತಾಂಶ ದೊರೆತಿದೆ. ಮಾದಕ ದ್ರವ್ಯ ಸೇವಿಸಿ ಸಿಕ್ಕಿಬಿದ್ದಿದ್ದ ವಿದ್ಯಾರ್ಥಿಗಳನ್ನು ಕೇವಲ ಶಿಕ್ಷೆಗೆ ಗುರಿಮಾಡದೆ, ಸೂಕ್ತ ಕೌನ್ಸೆಲಿಂಗ್ ನೀಡಿದ ಪರಿಣಾಮ ಮರುಪರೀಕ್ಷೆಯಲ್ಲಿ ಶೇಕಡಾ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ವ್ಯಸನಮುಕ್ತರಾಗಿರುವುದು ದೃಢಪಟ್ಟಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಗರದ ಒಟ್ಟು 150 ಕಾಲೇಜುಗಳ ಸುಮಾರು 8,310 ವಿದ್ಯಾರ್ಥಿಗಳನ್ನು ಜನವರಿಯಿಂದೀಚೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 98 ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಇರುವುದು ದೃಢಪಟ್ಟಿತ್ತು. ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಯ ಸಹಕಾರದೊಂದಿಗೆ ಅವರಿಗೆ ತಜ್ಞರಿಂದ ನಿರಂತರ ಮಾನಸಿಕ ಸಮಾಲೋಚನೆ ನಡೆಸಲಾಗಿತ್ತು. ಕೌನ್ಸೆಲಿಂಗ್ ಪ್ರಕ್ರಿಯೆಯ ಪ್ರಗತಿ ತಿಳಿಯಲು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಮೊದಲ ಹಂತವಾಗಿ 50 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಿದಾಗ 38 ವಿದ್ಯಾರ್ಥಿಗಳ ವರದಿ ಸಂಪೂರ್ಣ ನೆಗೆಟಿವ್ ಬಂದಿದೆ. ಉಳಿದ 12 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಕೌನ್ಸೆಲಿಂಗ್ ಮುಂದುವರಿಸಲು ನಿರ್ದೇಶಿಸಲಾಗಿದ್ದು, ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕರಿಸಿದ ಕಾಲೇಜು ಮಂಡಳಿ ಹಾಗೂ ಸಾರ್ವಜನಿಕರಿಗೆ ಪೊಲೀಸ್ ಕಮೀಷನರ್ ಧನ್ಯವಾದ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









