
ಬಂಟ್ವಾಳ : ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ನೀಡಿದ ನೋಟೀಸ್ಗೆ ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ನೋಟೀಸ್ ತಮಗೆ ‘ಕೂದಲಿಗೆ ಸಮಾನ’ ಎಂದು ಲೇವಡಿ ಮಾಡಿದ್ದಾರೆ. ಬಂಟ್ವಾಳ ಹಾಗೂ ಬಿಸಿರೋಡ್ ಚಲೋ ಪ್ರತಿಭಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ನೀಡಿರುವ ಹಕ್ಕಿನಂತೆ ತಾವು ಭರತ್ ಕುಮ್ದೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ನಿಜ. ಆದರೆ ತಾವು ಎಲ್ಲಿಯೂ ಕೊಲೆ ಮಾಡಲು ಅಥವಾ ಹಲ್ಲೆ ನಡೆಸಲು ಪ್ರಚೋದನೆ ನೀಡಿಲ್ಲ. ಆಡಿಯೋ ರೆಕಾರ್ಡ್ ಕೈಯಲ್ಲಿದ್ದರೂ ಪೊಲೀಸರು ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳ ಚೇಲಾಗಳಂತೆ ವರ್ತಿಸುತ್ತಿದ್ದಾರೆ ಎಂದು ಆಪಾದಿಸಿದರು. ಈಗಾಗಲೇ ತಮ್ಮ ಮೇಲೆ 110 ಪ್ರಕರಣಗಳಿದ್ದು, ಇಂತಹ ರಾಜಕೀಯ ಪ್ರೇರಿತ ನೋಟೀಸ್ಗಳಿಗೆ ಹೆದರುವುದಿಲ್ಲ ಎಂದು ಸವಾಲು ಹಾಕಿದರು.
ಇದೇ ವೇಳೆ, ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದ ಭರತ್ ಕುಮ್ದೇಲ್ ಹಾಗೂ ಇತರರ ಮೇಲೆ ಗೂಂಡಾ ಕಾಯ್ದೆ ಹಾಕಿ ಜೈಲಿಗೆ ಅಟ್ಟಲಾಗಿದೆ ಎಂದು ಪ್ರಭಾಕರ್ ಭಟ್ ಆರೋಪಿಸಿದರು. ಭರತ್ ಬಂಧನದ ಬಳಿಕ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ದ ರಿಕ್ಷಾ ಚಾಲಕನ ಮೇಲೆಯೂ ಪ್ರಕರಣ ದಾಖಲಿಸಿರುವುದು ಪೋಲಿಸರ ಅತಿರೇಕದ ವರ್ತನೆಗೆ ಸಾಕ್ಷಿ ಎಂದರು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡಿದವರ ಮೇಲೆ ಕೇಸ್ ಹಾಕುವುದು ಯಾವ ಸಂವಿಧಾನ ಎಂದು ಪ್ರಶ್ನಿಸಿದ ಅವರು, ನಾವು ಹತ್ಯೆ ಸಂಸ್ಕೃತಿಯನ್ನು ಬೆಂಬಲಿಸುವುದಿಲ್ಲ, ಆದರೆ ಅನ್ಯಾಯವಾಗಿ ನಿರಪರಾಧಿಗಳನ್ನು ಸಿಲುಕಿಸುವುದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇನ್ನೊಂದೆಡೆ, ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ (SIT) ರಚಿಸಿರುವುದನ್ನು ಸ್ವಾಗತಿಸುತ್ತಲೇ, ಆ ತಂಡದ ಕಾರ್ಯವೈಖರಿಯ ಬಗ್ಗೆ ಪ್ರಭಾಕರ್ ಭಟ್ ಸಂಶಯ ವ್ಯಕ್ತಪಡಿಸಿದ್ದಾರೆ. 14 ವರ್ಷಗಳಿಂದ ಸೌಜನ್ಯಳ ಆತ್ಮ ನ್ಯಾಯಕ್ಕಾಗಿ ಅಲೆಯುತ್ತಿದ್ದು, ನೂರಕ್ಕೆ ನೂರರಷ್ಟು ಸತ್ಯ ಹೊರಬರಬೇಕು ಎಂದರು. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಂತಹ ಪ್ರಾಮಾಣಿಕ ಮತ್ತು ಗಟ್ಟಿ ನಿರ್ಧಾರದ ಅಧಿಕಾರಿಗಳನ್ನು ಎಸ್ಐಟಿಗೆ ನಿಯೋಜಿಸಿದ್ದರೆ ಸಾರ್ವಜನಿಕರಿಗೆ ಹೆಚ್ಚಿನ ವಿಶ್ವಾಸ ಬರುತ್ತಿತ್ತು. ಆದರೆ ಪ್ರಸ್ತುತ ತಂಡದಲ್ಲಿರುವ ಕೆಲವು ಅಧಿಕಾರಿಗಳ ನಿಷ್ಠೆಯ ಬಗ್ಗೆ ಅನುಮಾನಗಳಿದ್ದು, ತನಿಖಾ ತಂಡವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸತ್ಯಾಸತ್ಯತೆಯನ್ನು ಹೊರತರಬೇಕೆಂದು ಮನವಿ ಮಾಡಿದರು.
ಪೋಲಿಸ್ ಅಧಿಕಾರಿಗಳು ಕಲ್ಕಡ್ಕ ಪ್ರಭಾಕರ್ ಭಟ್ ನೋಡಿ ಕಲಿಯಲಿ: ಬಿ.ಸಿ. ರೋಡ್ ಚಲೋದಲ್ಲಿ ವಜ್ರದೇಹಿ ಸ್ವಾಮೀಜಿ ಆಕ್ರೋಶ

ಬಿಸಿರೋಡ್ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಇದು ಸೌಮ್ಯತೆಯಿಂದ ಆಶೀರ್ವಚನ ನೀಡುವ ವೇಳೆಯಲ್ಲ, ಬದಲಿಗೆ ಅನ್ಯಾಯದ ವಿರುದ್ಧ ಕ್ರಾಂತಿಕಾರಕವಾಗಿ ಪ್ರತಿಭಟಿಸುವ ಸಮಯ ಎಂದು ಗುಡುಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯನ್ನು ತೀವ್ರವಾಗಿ ತೊಳೆಯುತ್ತಾ, ನಿಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಇಟ್ಟುಕೊಂಡಿರುವ ನೀವು, ಹಿಂದೂ ಸಮಾಜದ ಏಕೈಕ ವೈದ್ಯರಾಗಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಧೈರ್ಯ ಮತ್ತು ನಿಲುವನ್ನು ನೋಡಿ ಕಲಿಯಬೇಕಿದೆ ಎಂದರು. ಭರತ್ ಕುಮ್ದೇಲ್ ವಿರುದ್ಧ ಕೋಕಾ ಕಾಯಿದೆ ರದ್ದಾದ ತಕ್ಷಣ ಗೂಂಡಾ ಕಾಯ್ದೆ ಬಳಸಿ ಜಾಮೀನು ಸಿಗದಂತೆ ತಡೆಯುತ್ತಿರುವ ಪೋಲಿಸರ ಹಾಗೂ ಸರ್ಕಾರದ ಕ್ರಮವನ್ನು ಅವರು ಕಟುವಾಗಿ ಖಂಡಿಸಿದರು.
ಇದೇ ವೇಳೆ, ಬಂಟ್ವಾಳದಲ್ಲಿ ನಡೆದ ಹತ್ಯೆಯನ್ನು ತಾವು ಅಥವಾ ಹಿಂದೂ ಸಮಾಜ ಎಂದಿಗೂ ಸಮರ್ಥಿಸುವುದಿಲ್ಲ, ಆದರೆ ನಿರಪರಾಧಿಗಳ ಮೇಲೆ ದ್ವೇಷ ಸಾಧನೆಯ ಕೇಸ್ ಹಾಕಿ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ ಎಂದು ಸ್ವಾಮೀಜಿ ಎಚ್ಚರಿಸಿದರು. ಪ್ರಭಾಕರ್ ಭಟ್ ಅವರ ಹಿಂದೆ ವಿಶಾಲ ಹಿಂದೂ ಸಮಾಜವೇ ನಿಂತಿದ್ದು, ಅಧಿಕಾರದ ಮದದಲ್ಲಿ ಚೇಲಾಗಳಂತೆ ವರ್ತಿಸುತ್ತಿರುವ ರಾಜಕಾರಣಿಗಳ ಮಾತನ್ನು ಕೇಳಿ ಅವರಿಗೆ ಕಿರುಕುಳ ನೀಡಬಾರದು ಎಂದು ಆಗ್ರಹಿಸಿದರು. ಭರತ್ ಕುಮ್ದೇಲ್ ಹಣೆಗೆ ಗುಂಡು ಹೊಡೆಯಿರಿ ಎಂದು ಹೇಳಿಕೆ ನೀಡಿದ ಮತಾಂಧರಿಗೆ ಕಠಿಣ ಎಚ್ಚರಿಕೆ ನೀಡಿದ ಶ್ರೀಗಳು, ಹಿಂದುತ್ವದ ಭದ್ರಕೋಟೆಯಾಗಿರುವ ಈ ಕರಾವಳಿ ಭಾಗದ ಶಕ್ತಿಯನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾದಾಗ ಈಗ ರಾಜಕೀಯ ಪ್ರೇರಿತವಾಗಿ ವರ್ತಿಸುತ್ತಿರುವ ಅಧಿಕಾರಿಗಳಿಗೂ ತಕ್ಕ ಪಾಠ ಸಿಗಲಿದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಈ ಸಮಾಜದ ಅಸ್ಮಿತೆಯಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತನೂ ಸಂಘಟನೆಗೆ ಬದ್ಧನಾಗಿದ್ದಾನೆ. ಒಬ್ಬ ಭರತ್ ಕುಮ್ದೇಲ್ನನ್ನು ಬಂಧಿಸಿದರೆ ಸಾವಿರಾರು ಭರತ್ ಕುಮ್ದೇಲರು ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ಪೊಲೀಸರು ತಕ್ಷಣವೇ ಭರತ್ ಮೇಲಿನ ಗೂಂಡಾ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









