ಮಂಗಳೂರು : ತುಳುನಾಡಿನ ದೈವಾರಾಧನೆ ಹಾಗೂ ಪ್ರಕೃತಿಯ ಅವಿನಾಭಾವ ಸಂಬಂಧವನ್ನು ಬಿಂಬಿಸುವ ಬಹುನಿರೀಕ್ಷಿತ “ಬನ” ತುಳು ಚಲನಚಿತ್ರವು ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ಇಂದು ದೀಪ ಬೆಳಗಿಸುವ ಮೂಲಕ ಅದ್ದೂರಿಯಾಗಿ ಬಿಡುಗಡೆಗೊಂಡಿತು. ಈಶಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮನೋಹರ್ ರೈ ವೈಪಾಲ ನಿರ್ಮಿಸಿರುವ ಈ ಚಿತ್ರಕ್ಕೆ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು, ತುಳುನಾಡಿನ ಹಿರಿಮೆಯನ್ನು ಹೆಚ್ಚಿಸುವಂತಹ ಕೆಲಸವನ್ನು ಈ ಸಿನಿಮಾ ಮಾಡಲಿ ಹಾಗೂ ಸಾರ್ವಜನಿಕರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಪ್ರೋತ್ಸಾಹಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖ ಗಣ್ಯರು ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದರು. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ರಾಜ್ಯ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಹಾಗೂ ನಟ ಸಾಯಿಕೃಷ್ಣ ಕುಡ್ಲ ಅವರು ಮಾತನಾಡಿ, ನಾಗಾರಾಧನೆಯ ಮಹತ್ವವನ್ನು ಎತ್ತಿಹಿಡಿಯುವ ಈ ಮಣ್ಣಿನ ಕಥೆಯನ್ನು ಪ್ರೇಕ್ಷಕರು ಚಿತ್ರಮಂದಿರಗಳಲ್ಲೇ ನೋಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಯಥಾರ್ಥ್ ಸೋಶಿಯಲ್ ಅಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭ ಕೋರಿದರು.
ಈ ಚಿತ್ರದ ಮೂಲಕ ನಿಹಾಲ್ ರೈ ಹಾಗೂ ಕೃತಿ ಶ್ರೀನಿವಾಸ್ ಪೂಜಾರಿ ಮುಖ್ಯಭೂಮಿಕೆಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶರತ್ ಆಳ್ವ, ಪ್ರಿಯಾ ಶೆಟ್ಟಿ, ವಿಜಯಹರಿ ರೈ ಸೇರಿದಂತೆ ಬೃಹತ್ ಕಲಾವಿದರ ಬಳಗವೇ ಚಿತ್ರದಲ್ಲಿದೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ, ನವೀನ್ ನೇರಳ್ತೊಡಿ ಸಂಕಲನ ಹಾಗೂ ಜಯಕಾರ್ತಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ರೀತಿ, ಹಾಸ್ಯ, ಸೆಂಟಿಮೆಂಟ್ ಜೊತೆಗೆ ಕೌತುಕ ಮೂಡಿಸುವ ಆಕ್ಷನ್-ಸಸ್ಪೆನ್ಸ್ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ ಎಂದು ನಿರ್ದೇಶಕ ನಿತಿನ್ ರೈ ತಿಳಿಸಿದ್ದಾರೆ.
ಈ ಹಿಂದೆ ‘ಧರ್ಮಚಾವಡಿ’ ಮತ್ತು ‘ಧರ್ಮದೈವ’ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದ್ದ ನಿತಿನ್ ರೈ, ಬಾರಿಗೆ ನಾಗಬನದ ಸುತ್ತ ಹೆಣೆದ ವಿಶಿಷ್ಟ ಕಥೆಯನ್ನು ಕಮರ್ಷಿಯಲ್ ರೂಪದಲ್ಲಿ ನೀಡಿದ್ದಾರೆ. ಕಾಡಿನ ನಿಗೂಢತೆ, ಹಿನ್ನೆಲೆ ಸಂಗೀತ ಹಾಗೂ ಕೌತುಕಭರಿತ ದೃಶ್ಯಗಳು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿವೆ. ಪ್ರಸ್ತುತ ಈ ಸಿನಿಮಾ ಮಂಗಳೂರು, ಸುರತ್ಕಲ್, ಉಡುಪಿ, ಮಣಿಪಾಲ, ಪುತ್ತೂರು, ಕಾರ್ಕಳ, ಬೆಳ್ತಂಗಡಿ ಸೇರಿದಂತೆ ಕರಾವಳಿಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









