ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ಭಾನುವಾರ ಬೆಳಿಗ್ಗೆ ಅತ್ಯಂತ ಮನಕಲಕುವ ಘಟನೆಯೊಂದು ಸಂಭವಿಸಿದ್ದು, ವಿಶೇಷ ಚೇತನ ಮಗಳನ್ನು ಕೊಲೆಗೈದ ತಾಯಿಯೊಬ್ಬರು ತಾನೂ ಜೀವತ್ಯಾಗ ಮಾಡಿದ್ದಾರೆ.
ಶಾನಾಡಿ ನಿವಾಸಿ ಸುಧಾಕರ ಕೊರಗ ಎಂಬವರ ಪತ್ನಿ ನೇತ್ರಾವತಿ (೩೪) ಹಾಗೂ ಇವರ ೧೪ ವರ್ಷದ ಮಗಳು ಸುಪ್ರತಿ ಮೃತಪಟ್ಟವರು. ಕೂಲಿ ಕಾರ್ಮಿಕರಾಗಿದ್ದ ಸುಧಾಕರ ಅವರಿಗೆ ಒಂದು ವರ್ಷದ ಗಂಡು ಮಗುವೂ ಇದೆ. ಮಗಳು ಸುಪ್ರತಿ ಹುಟ್ಟಿನಿಂದಲೇ ತೀವ್ರ ವೈಕಲ್ಯದಿಂದ ಬಳಲುತ್ತಿದ್ದು, ಚಲನವಲನ ಹಾಗೂ ಮಾತು ಬಾರದೆ ಪೂರ್ಣವಾಗಿ ಹಾಸಿಗೆ ಹಿಡಿದಿದ್ದಳು. ಮಗಳ ಸಂಪೂರ್ಣ ಆರೈಕೆಯನ್ನು ತಾಯಿಯೇ ನೋಡಿಕೊಳ್ಳುತ್ತಿದ್ದರು.
ಭಾನುವಾರ ಬೆಳಿಗ್ಗೆ ಪತಿ ಸುಧಾಕರ ಕೆಲಸಕ್ಕೆ ತೆರಳಿದ ಬಳಿಕ, ಗೃಹಕೃತ್ಯಗಳನ್ನು ಪೂರೈಸಿದ ನೇತ್ರಾವತಿಯವರು ಮಗಳ ಕುತ್ತಿಗೆಗೆ ಕತ್ತಿಯಿಂದ ಕಡಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ತದನಂತರ ತಾವೂ ಕೂಡ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ಈ ಕೃತ್ಯಕ್ಕೆ ಕಾರಣ ಏನೆಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಉಡುಪಿ ಹೆಚ್ಚುವರಿ ಎಸ್ಪಿ ಸುಧಾಕರ್ ಎಸ್., ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಬ್ರಹ್ಮಾವರ ವೃತ್ತನಿರೀಕ್ಷಕ ಗೋಪಿಕೃಷ್ಣ, ಕೋಟ ಎಸ್ಐ ಪ್ರವೀಣ್ ಕುಮಾರ್ ಹಾಗೂ ಸೋಕೋ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









