ಕುಂದಾಪುರ : ಯುಎಇಯ ಶಾರ್ಜಾದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ರಹಸ್ಯಮಯ ರೀತಿಯಲ್ಲಿ ಕೊಲೆಯಾಗಿದ್ದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಮೃತದೇಹ ಕೊನೆಗೂ ತವರೂರಿಗೆ ತಲುಪಿದೆ. ಸೆಪ್ಟೆಂಬರ್ 25ರಂದು ವಿಮಾನದ ಮೂಲಕ ತರಲಾದ ಪಾರ್ಥಿವ ಶರೀರವನ್ನು ಶುಕ್ರವಾರ ಬೆಳಿಗ್ಗೆ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಬಳಿಕ, ಬೆಳಿಗ್ಗೆ 10.30ರ ಸುಮಾರಿಗೆ ಶಾಸ್ತ್ರೀ ವೃತ್ತದ ಸಮೀಪದಲ್ಲಿರುವ ಸಿ.ಎಸ್.ಐ ಕೃಪಾ ದೇವಾಲಯದ ಆವರಣಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ತಂದೆ-ತಾಯಿಯ ಸಮಾಧಿಗಳ ಪಕ್ಕದಲ್ಲೇ ಅಲ್ವಿನ್ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಂತಿಮ ಯಾತ್ರೆಯ ಧಾರ್ಮಿಕ ವಿಧಿವಿಧಾನಗಳನ್ನು ಸಿ.ಎಸ್.ಐ ಕೃಪಾ ಚರ್ಚ್ನ ಧರ್ಮಗುರು ರೆ. ಫಾ. ಇಮಾನ್ಯುವಲ್ ಜಯಕರ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ವೇಳೆ ಏರಿಯಾ ಅಧ್ಯಕ್ಷರಾದ ರೆ. ಕಿಶೋರ್ ಕುಮಾರ್, ರೆ. ಎಲ್ವಿನ್ ಜೋಸೆಫ್, ಸಿಎಎಸ್ಐ ಡಯಾಸಿಸ್ ಕೋಶಾಧಿಕಾರಿ ಐವಾನ್ ಸೋನ್ಸ್, ರೆ. ಪ್ರವೀಣ್ ಮಾಬೆನ್, ಬಸೂರು ಎಲಿಜಬೆತ್ ಚರ್ಚ್ನ ರೆ. ಫಾ. ರವಿ ಶಶಿಕಲಾ ಹಾಗೂ ರೆ. ಸ್ಟೀವನ್ ಸರ್ವೋತ್ತಮ್ ಸೇರಿದಂತೆ ಹಲವು ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿ ದಫನ ಕಾರ್ಯ ನಡೆಸಿಕೊಟ್ಟರು.
ಮೃತರ ಅಂತಿಮ ದರ್ಶನಕ್ಕಾಗಿ ಹಲವು ರಾಜಕೀಯ ಹಾಗೂ ಸಾಂಸ್ಕೃತಿಕ ಗಣ್ಯರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆ ಮಾಜಿ ಸದಸ್ಯರಾದ ಪ್ರಭಾಕರ್, ರಾಜೇಶ ಕಾವೇರಿ, ರತ್ನಾಕರ ಹಾಗೂ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ವಿಕಾಸ ಹೆಗ್ಡೆ, ವಿಜಯ್ ಎಸ್ ಪೂಜಾರಿ, ವಿ. ನರಸಿಂಹ ಮುಂತಾದವರು ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಶುಕ್ರವಾರ ಮುಂಜಾನೆಯೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ ಎಂ.ಎ. ಗಫೂರ್, ಪ್ರಶಾಂತ್, ಆಕಾಶ್, ಪ್ರಮೀಳಾ ಜತ್ತನ್, ಉದಯ್ ಮತ್ತಿತರರ ತಂಡವು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಅಧಿಕೃತವಾಗಿ ಸ್ವೀಕರಿಸಿ ಕುಂದಾಪುರಕ್ಕೆ ತರುವಲ್ಲಿ ಸಕ್ರಿಯವಾಗಿ ಭಾಗಿಯಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









