ಮಂಗಳೂರು : ಜಗತ್ತಿನಾದ್ಯಂತ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿರುವ ರಾಮಾಯಣ ಮಹಾಕಾವ್ಯಕ್ಕೆ ಆ ಶ್ರೇಷ್ಠತೆಯನ್ನು ತಂದುಕೊಟ್ಟದ್ದು ಅದನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಸಾಹಿತ್ಯಿಕ ಕೊಡುಗೆ ಮತ್ತು ಶೈಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ಕ್ರಿಸ್ತಪೂರ್ವ 5ನೇ ಶತಮಾನದಲ್ಲೇ 7 ಕಾಂಡಗಳನ್ನೊಳಗೊಂಡ 24 ಸಾವಿರ ಶ್ಲೋಕಗಳನ್ನು ನವರಸಗಳೊಂದಿಗೆ ಸಂಯೋಜಿಸಿ ಬರೆದ ವಾಲ್ಮೀಕಿಯವರ ಮಹತ್ಕಾರ್ಯ ಮತ್ತು ಜ್ಞಾನಶಕ್ತಿ ನಿಜಕ್ಕೂ ವಿಸ್ಮಯಕಾರಿಯಾದದ್ದು ಎಂದು ಬಣ್ಣಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಪರಿಶಿಷ್ಟ ಪಂಗಡ ಮತ್ತು ಗಿರಿಜನ ಸಮುದಾಯಗಳ ಕಲ್ಯಾಣಕ್ಕಾಗಿಯೇ ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆ ಸ್ಥಾಪಿಸಿದ್ದು, ಸಮಾಜದ ಕೊನೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರೆಯುವಂತೆ ಸರ್ಕಾರದ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು. ಇದೇ ವೇಳೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ವಾಲ್ಮೀಕಿಯವರಿಂದ ರಚಿತವಾದ ರಾಮಾಯಣವು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು, ಪ್ರತಿಯೊಂದು ಪೀಳಿಗೆಗೂ ಅನ್ವಯಿಸುವ ಇದರ ತತ್ತ್ವಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಹೋರಾಟದ ಹಲಗಲಿ ಬೇಡರ ಬಂಡಾಯದ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಸ್ಮರಣಾರ್ಥ ನೀಡಲಾಗುವ 1 ಲಕ್ಷ ರೂಪಾಯಿ ಪ್ರಶಸ್ತಿಯನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 619 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಸುಳ್ಯದ ಅಶ್ವಿತ ಎಂ.ಡಿ. ಹಾಗೂ ಅಳಿಕೆಯ ನೀಲ್ ಕಮಲ್ ಎಸ್. ಕಳ್ಳಿಮನಿ ಅವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇಣಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಡಿಸಿಪಿ ಸ್ಯಾಮುವೆಲ್ ವರ್ಗೀಸ್, ಎಎಸ್ಪಿ ಅನಿಲ್ಕುಮಾರ್ ಭೂಮಿರೆಡ್ಡಿ ಹಾಗೂ ಡಿಸಿಆರ್ಇ ಎಸ್ಪಿ ಸೈಮನ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಸವರಾಜು ಎಲ್ಲರನ್ನೂ ಸ್ವಾಗತಿಸಿದರೆ, ಮಂಜುಳಾ ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









