ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನೂತನ ವಲಯ ನಿಯಮಾವಳಿಗಳಲ್ಲಿನ ದೋಷಗಳು ಹಾಗೂ ಕಟ್ಟಡ ಪರವಾನಗಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ತೊಡಕುಗಳಿಂದಾಗಿ ಸಾಮಾನ್ಯ ಜನರು ಮತ್ತು ಮನೆ ನಿರ್ಮಾತೃಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕಟ್ಟಡಗಳ ಎತ್ತರವನ್ನು ಏರಿಸುವುದಷ್ಟೇ ಅಭಿವೃದ್ಧಿಯಲ್ಲ; ಬದಲಿಗೆ ನಾಗರಿಕರ ಸುರಕ್ಷತೆ, ಸ್ವಂತ ಮನೆ ಹೊಂದುವ ಹಕ್ಕು ಹಾಗೂ ಕೈಗೆಟುಕುವ ದರದಲ್ಲಿ ನಿವೇಶನಗಳು ದೊರೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ವಿವಾದಾತ್ಮಕವಾಗಿರುವ ಟೆಲಿಸ್ಕೋಪಿಕ್ ಸೆಟ್ಬ್ಯಾಕ್ ನಿಯಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, 7 ಅಂತಸ್ತಿನ ಐಷಾರಾಮಿ ಕಟ್ಟಡಗಳಿಗೆ ಕೇವಲ 1 ಮೀಟರ್ ಸೆಟ್ಬ್ಯಾಕ್ ನಿಗದಿಪಡಿಸಿ, ಸಾಮಾನ್ಯ ಜನರ 2 ಅಂತಸ್ತಿನ ಮನೆಗಳಿಗೆ 1.5 ಮೀಟರ್ ಸೆಟ್ಬ್ಯಾಕ್ ವಿಧಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಸಹ ಜಾಗವಿಲ್ಲದAತಹ ಈ ಕರಾಳ ನಿಯಮವನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ತಜ್ಞರ ಅಭಿಪ್ರಾಯ ಪಡೆದು ವೈಜ್ಞಾನಿಕ ಮಾನದಂಡಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಏಕ ಭೂ ನಿರ್ವಹಣಾ ವ್ಯವಸ್ಥೆ ತಂತ್ರಾಂಶದಲ್ಲಿನ (ULMS) ತಾಂತ್ರಿಕ ಲೋಪದೋಷಗಳು ಹಾಗೂ ಇ-ಖಾತಾ, ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಪರವಾನಗಿ ಪಡೆಯಲು ಸಾರ್ವಜನಿಕರು ಕಚೇರಿಗಳ ನಡುವೆ ಅಲೆಯುವಂತಾಗಿದೆ ಎಂದು ದೂರಿದರು. ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡುವವರಿಗೆ ಹಿಂದೆ ಸಿಗುತ್ತಿದ್ದ ಟಿಡಿಆರ್ ಹಾಗೂ ಪ್ರೀಮಿಯಂ ಎಫ್ಎಆರ್ ಸೌಲಭ್ಯಗಳನ್ನು ಈಗಿನ ನಿಯಮಗಳಲ್ಲಿ ಕೈಬಿಟ್ಟಿರುವುದು ಸರಿಯಲ್ಲ ಎಂದರು.
ನಗರದ ಬಹುತೇಕ ಪ್ರದೇಶಗಳಲ್ಲಿ 6 ಮೀಟರ್ಗಿಂತ ಕಡಿಮೆ ಅಗಲದ ರಸ್ತೆಗಳಿದ್ದರೂ, ಸಣ್ಣ ವಸತಿಗೃಹ ಹಾಗೂ ಶಾಲೆಗಳ ನಿರ್ಮಾಣಕ್ಕೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವುದು ಧಾರ್ಮಿಕ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳ ವಿಸ್ತರಣೆಗೆ ದೊಡ್ಡ ತಡೆಯಾಗಿದೆ ಎಂದು ಎಚ್ಚರಿಸಿದರು. ಅಲ್ಲದೆ, ದಶಕಗಳಿಂದ ಪರಿಷ್ಕರಣೆಯಾಗದ ಸಿಡಿಪಿ (CDP) ನಿಯಮಗಳಿಂದಾಗಿ ಬಡ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಡಿಪ್ಲೋಮಾ ಸಿವಿಲ್ ಇಂಜಿನಿಯರ್ಗಳ ಸಂಘದ ಅಧ್ಯಕ್ಷ ಯೋಗೀಶ್ ಪೈ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









