ಕಾಪು: ಕಾಲನಿರ್ಣಯ, ಪಂಚಾಂಗ ತಯಾರಿಕೆ ಹಾಗೂ ನಾಡಿವಿದ್ಯೆ ಸೇರಿದಂತೆ ಹತ್ತು ಹಲವು ಪುರಾತನ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ಋಷಿಮುನಿಗಳು ತಪಸ್ಸು ಆಚರಿಸುತ್ತಿದ್ದರೆಂದು ಹೇಳಲಾಗುವ, ಕಾಲಗರ್ಭದಲ್ಲಿ ಮರೆಯಾಗಿದ್ದ ಅಡ್ವೆ ನಂದಿಕೂರಿನ ಐತಿಹಾಸಿಕ ನಿನ್ನಿಕಲ್ಲು ಪಾದೆಯಲ್ಲಿ 1,008 ದೀಪಗಳನ್ನು ಬೆಳಗಿಸುವ ಮೂಲಕ ಬಲಿಪರ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ತುಳುವ ಮಹಾಸಭೆಯ ಕಾಪು ವಲಯ ಸಮಿತಿಯ ನೇತೃತ್ವದಲ್ಲಿ ಹಾಗೂ ಅಡ್ವೆ ನಂದಿಕೂರು ಗ್ರಾಮದ ಗ್ರಾಮಸ್ಥರ ಸಕ್ರಿಯ ಸಹಯೋಗದಲ್ಲಿ ಈ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. 1,008 ಹಣತೆಗಳ ಬೆಳಕಿನಲ್ಲಿ ಐತಿಹಾಸಿಕ ನಿನ್ನಿಕಲ್ಲು ಪಾದೆ ಕಂಗೊಳಿಸಿತು. ದೀಪಗಳ ಸಾಲು ಪುರಾತನ ಕ್ಷೇತ್ರದ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹಾಗೂ ಹಿರಿಯ ಜಾನಪದ ಕಲಾವಿದ, ದೈವ ನರ್ತಕ ಬಾಲಕೃಷ್ಣ ಕತ್ತಲ್ಸಾರ್ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ‘ಬಲಿಂದ್ರ ಲೆಪ್ಪು’ ನೀಡುವ ಮೂಲಕ ಕಾರ್ಯಕ್ರಮಕ್ಕೆ ನವಚೈತನ್ಯ ತುಂಬಿದರು. ಬಳಿಕ ಮಾತನಾಡಿದ ಅವರು ಬೆಳಕಿನ ಹಬ್ಬ ದೀಪಾವಳಿಯ ಮಹತ್ವ, ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಆಚರಣೆಗಳು ಹಾಗೂ ಅವುಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ದಯಾನಂದ ಜಿ. ಕತ್ತಲ್ಸಾರ್ ಅವರು, ಬಲಿಚಕ್ರವರ್ತಿಯ ಕಾಲವು ಕಪಟ, ವಂಚನೆ ಹಾಗೂ ಜಾತಿಭೇದಗಳಿಲ್ಲದ ಸತ್ಯದ ಯುಗವಾಗಿತ್ತು. ‘ನಿನ್ನಿ’ ಎಂದರೆ ಸತ್ಯ ಎಂಬ ಅರ್ಥವಿದೆ. ನಿನ್ನಿಕಲ್ಲು ಪಾದೆಯ ಈ ಸತ್ಯದ ನೆಲದಲ್ಲಿ ಅರಳಿದ ಬೆಳಕು ಬಲಿಚಕ್ರವರ್ತಿಯ ಹೊಸ ತುಳು ರಾಜ್ಯದ ಪುನರುತ್ಥಾನಕ್ಕೆ ಪ್ರೇರಣೆಯಾಗಲಿ. ಬಲಿಯಂದ್ರನ ತುಳು ರಾಜ್ಯ ಮರಳಿ ಬರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನೆರೆದಿದ್ದ ನೂರಾರು ಭಕ್ತರಿಗೆ ಪಾನಕ, ಪಂಚಕಜ್ಜಾಯ ಹಾಗೂ ಉಪಹಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್ನ ನಿರ್ದೇಶಕ ರಾಜೇಶ್ ಆಳ್ವ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ಕಾರ್ಯದರ್ಶಿ ಮನೋಹರ್ ರೈ, ತುಳುವ ಮಹಾಸಭೆಯ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ, ನಿನ್ನಿಕಲ್ಲು ಪಾದೆ ಪುನಶ್ಚೇತನ ಸಮಿತಿಯ ಪ್ರಧಾನ ಸಂಚಾಲಕ ವಿಜಿತ್ ಶೆಟ್ಟಿ ಕೊರಂಗ್ರಪಾಡಿ ದೊಡ್ಡಮನೆ, ಕಾಪು ತುಳುವ ಮಹಾಸಭೆಯ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ, ಪ್ರಧಾನ ಸಂಚಾಲಕ ವಿಕ್ಕಿ ಪೂಜಾರಿ ಮಡುಂಬು, ಪುನೀತ್ (ತುಳುನಾಡು ವಾರ್ತೆ), ಕಾಪು ತುಳುವ ಮಹಾಸಭೆಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ವೇತಾ ಎಲ್. ಶೆಟ್ಟಿ, ಜೊತೆ ಕಾರ್ಯದರ್ಶಿ ದೀಕ್ಷಾ ಶೆಟ್ಟಿ, ಸದಸ್ಯರಾದ ಹೇಮಲತಾ ಮತ್ತು ಸುಲೋಚನಾ ಶೆಟ್ಟಿ, ಕೋಟಿ ಚೆನ್ನಯ ಗೆಳೆಯರ ಬಳಗ ಅಡ್ವೆ ನಂದಿಕೂರು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
https://t.co/4aj3l4r3EQ ಬಲಿಯಂದ್ರನ ತುಳು ರಾಜ್ಯ ಮರಳಿ ಬರಲಿ: ದಯಾನಂದ ಜಿ. ಕತ್ತಲ್ಸಾರ್ ಆಶಯ #Kaup #TuluNadu #BaliParba #Deepotsava #TuluCulture #MegaMediaNews #MegaMediaNewsKannada #MegaMediaTV #MegaMediaNewsLive
— Mega Media News (@megamedianews10) November 11, 2026
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









