ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘವು (ರಿ) ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ದಿನಾಂಕ 09.12.2025 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ದಿನ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಕೆಲಸ ಸ್ಥಗಿತಗೊಳಿಸಿ, ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆ ನಡೆಸುವುದಾಗಿ ಸಂಘಟಕ ಆನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಯ ಮುಖ್ಯ ಕಾರಣವೆಂದರೆ ಗ್ರಾಮ ಪಂಚಾಯತ್ಗಳಲ್ಲಿ ಸಂಜೀವಿನಿ ಒಕ್ಕೂಟ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಪೌರಕಾರ್ಮಿಕರು ಮತ್ತು ಸ್ವಚ್ಛತಾ ವಾಹನ ಚಾಲಕರ ಶೋಷಣೆ. ಸುಮಾರು 8 ವರ್ಷಗಳಿಂದ ಈ ಕಾರ್ಮಿಕರಿಗೆ ಕನಿಷ್ಠ ವೇತನ, ಇಎಸ್ಐ, ಪಿಎಫ್, ಆರೋಗ್ಯ ಕಾರ್ಡ್, ವೈದ್ಯಕೀಯ ತಪಾಸಣೆ, ಮಾಸ್ಕ್ ಮತ್ತು ಗೌಸ್ಗಳಂತಹ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ. ಗುತ್ತಿಗೆದಾರರು ತಿಂಗಳು ಪೂರ್ತಿ ಕೆಲಸ ನೀಡದೆ, ಕೇವಲ ದಿನಕ್ಕೆ ₹300/- ವೇತನ ನೀಡಿ, ವಾರದಲ್ಲಿ 2-3 ದಿನ ಮಾತ್ರ ಕೆಲಸ ನೀಡುವ ಮೂಲಕ ಶೋಷಣೆ ಮತ್ತು ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ. ಈ ಅಲ್ಪ ಆದಾಯದಿಂದ ತಮ್ಮ ಮತ್ತು ಮಕ್ಕಳ ವಿದ್ಯಾಭ್ಯಾಸದ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಸಂಘವು ಪ್ರಮುಖವಾಗಿ, ಸಂಜೀವಿನಿ ಒಕ್ಕೂಟ ಗುತ್ತಿಗೆದಾರರನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದೆ. ಬದಲಾಗಿ, ಸ್ಥಳೀಯ ಪಂಚಾಯತ್ ಮಾದರಿಯಂತೆ ಎಲ್ಲಾ ಬಡ ಸ್ವಚ್ಛತಾ ಪೌರಕಾರ್ಮಿಕರು ಮತ್ತು ಚಾಲಕರನ್ನು ನೇರವಾಗಿ ಗ್ರಾಮ ಪಂಚಾಯತ್ ಅಧೀನದಲ್ಲಿ ನೇಮಕ ಮಾಡಿಕೊಂಡು, ಪಂಚಾಯತ್ ವತಿಯಿಂದಲೇ ಕನಿಷ್ಠ ವೇತನ ಮತ್ತು ಎಲ್ಲಾ ಸೌಲಭ್ಯಗಳನ್ನು ಪಾವತಿಸಬೇಕು ಎಂದು ಆಗ್ರಹಿಸಿದೆ.
ಕಾರ್ಮಿಕರ ಕಷ್ಟ ತೊಂದರೆಗಳನ್ನು ನೀಗಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಂಘವು 16.02.2024 ರಿಂದ 25.06.2025 ರವರೆಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಯಾವುದೇ ರೀತಿಯ ಉತ್ತರ ನೀಡದೆ, ಮಾತುಕತೆ ನಡೆಸದೆ ತೀವ್ರ ನಿರ್ಲಕ್ಷ್ಯ ತೋರಿಸಿದೆ. ಈ ನಿರ್ಲಕ್ಷ್ಯದ ಕಾರಣದಿಂದಲೇ ತಮ್ಮ ಬೇಡಿಕೆಗಳು ಈಡೇರದೆ ಉಳಿದಿದ್ದು, ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









