ಮಂಗಳೂರು : ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಪದವಿ ಮುಗಿಸಿದ್ದ ಕಾಸರಗೋಡು ಮೂಲದ ಹಿಂದೂ ಯುವತಿಯೊಬ್ಬಳು, ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಮನೆ ಬಿಟ್ಟು ಹೋಗಿ ರಿಜಿಸ್ಟರ್ ಮದುವೆಗೆ ಮುಂದಾದ ಘಟನೆ ಸಂಚಲನ ಮೂಡಿಸಿದೆ. ಕಾಸರಗೋಡಿನ ಮೀಪುಗುರಿ ನಿವಾಸಿ ವೈಶಾಲಿ ಎಂಬಾಕೆ ಸುರತ್ಕಲ್ನ ಜುವೆಲ್ಲರಿಯೊಂದರಲ್ಲಿ ಕೆಲಸಕ್ಕಿದ್ದ ಮೊಹಮ್ಮದ್ ಮಿದ್ಲಾಜ್ ಎಂಬಾತನ ಪ್ರೇಮಪಾಶಕ್ಕೆ ಬಿದ್ದು, ಜನವರಿ 31ರಂದೇ ಕೇರಳದ ವಯನಾಡಿನಲ್ಲಿ ಮದುವೆಗೆ ನೋಂದಣಿ ಮಾಡಿಕೊಂಡಿದ್ದಳು. ಈ ವಿಷಯ ಜಾಲತಾಣಗಳಲ್ಲಿ ಹರಿದಾಡಿದ ಫೋಟೋ ಮೂಲಕ ಫೆಬ್ರವರಿ 8ರಂದು ಹೆತ್ತವರಿಗೆ ತಿಳಿದುಬಂದಿದೆ. ವಿದೇಶದಲ್ಲಿದ್ದ ತಂದೆ ತಕ್ಷಣವೇ ಊರಿಗೆ ಬಂದು ಮಗಳಿಗಾಗಿ ಹುಡುಕಾಟ ನಡೆಸಿದ್ದು, ಸುರತ್ಕಲ್ ಪೊಲೀಸರ ನೆರವಿನಿಂದ ವಯನಾಡಿನಲ್ಲಿ ಜೋಡಿಯನ್ನು ಪತ್ತೆಹಚ್ಚಲಾಗಿದೆ.
ಪೊಲೀಸ್ ಠಾಣೆಯಲ್ಲಿ ನಡೆದ ಹೈಡ್ರಾಮಾದಲ್ಲಿ, ಹೆತ್ತವರು ಮಗಳ ಕಾಲಿಗೆ ಬಿದ್ದು ಅತ್ತರೂ ಆಕೆಯ ಮನಸ್ಸು ಕರಗಿಲ್ಲ. “22 ವರ್ಷಗಳ ಕಾಲ ನಿನ್ನನ್ನು ಪ್ರೀತಿಯಿಂದ ಸಾಕಿದ್ದೇವೆ, ನಮ್ಮನ್ನು ಬಿಟ್ಟು ಹೋಗಬೇಡ” ಎಂದು ತಂದೆ-ತಾಯಿ ಪರಿ ಪರಿಯಾಗಿ ಬೇಡಿಕೊಂಡರೂ, ವೈಶಾಲಿ ಮಾತ್ರ ತಾನು ಪ್ರಿಯಕರನೊಂದಿಗೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಮೇಜರ್ ಆಗಿರುವ ಕಾರಣ ಆಕೆಯ ನಿರ್ಧಾರಕ್ಕೆ ಬೆಲೆ ನೀಡಿದ ಪೊಲೀಸರು, ಹೇಳಿಕೆ ದಾಖಲಿಸಿಕೊಂಡು ಮಿದ್ಲಾಜ್ ಜೊತೆ ಕಳುಹಿಸಿಕೊಟ್ಟಿದ್ದಾರೆ. ಕ್ರಿಮಿನಾಲಜಿಯಂತಹ ಗಂಭೀರ ವಿಷಯವನ್ನು ಓದಿದ ವಿದ್ಯಾರ್ಥಿನಿಯೇ ಈ ರೀತಿ ಹಾದಿ ತಪ್ಪಿರುವುದು ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಗಳು ಇದೊಂದು ‘ಲವ್ ಜಿಹಾದ್’ ಕೃತ್ಯ ಎಂದು ಆರೋಪಿಸಿವೆ.
ಈ ಘಟನೆಯು ನಗರದ ಪಿಜಿಗಳಲ್ಲಿ ವಾಸವಿರುವ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಅವರ ಮೇಲಿರುವ ಹತೋಟಿಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಪದವಿ ಮುಗಿದಿದ್ದರೂ ಪಿಜಿಯಲ್ಲೇ ಉಳಿದುಕೊಂಡಿದ್ದ ವೈಶಾಲಿ, ತನ್ನ ಚಟುವಟಿಕೆಗಳನ್ನು ಹೆತ್ತವರಿಂದ ಮರೆಮಾಚಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳೂರು ಮತ್ತು ಸುರತ್ಕಲ್ ಭಾಗದ ಅನೇಕ ಪಿಜಿಗಳಲ್ಲಿ ವಿದ್ಯಾರ್ಥಿಗಳ ರಾತ್ರಿ ಸಂಚಾರ ಹಾಗೂ ಗೆಳೆಯರೊಂದಿಗೆ ಸುತ್ತಾಡುವ ಬಗ್ಗೆ ಸರಿಯಾದ ನಿಗಾ ಇಲ್ಲದಿರುವುದು ಇಂತಹ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಲಿಯಲು ಅಥವಾ ಕೆಲಸಕ್ಕೆ ಹೋಗುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









