ಬೆಳ್ತಂಗಡಿ : ತಾಲೂಕಿನ ಕೊತ್ಲೂರು ಎಂಬಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ನಕ್ಸಲ್ ಜಾನ್ ಅಲಿಯಾಸ್ ಜಯಣ್ಣ ಅಲಿಯಾಸ್ ಮಹೇಶ್ (49) ಎಂಬಾತನನ್ನು ಕೇರಳ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದವನಾದ ಜಯಣ್ಣ, ಕಳೆದ ಆರು ತಿಂಗಳಿನಿಂದ ಕೇರಳದ ತ್ರಿಶೂರ್ ಜೈಲಿನಲ್ಲಿದ್ದನು. ಇತ್ತೀಚೆಗೆ ಈತ ಕರ್ನಾಟಕದ ಮುಖ್ಯಮಂತ್ರಿಗಳ ಮುಂದೆ ಶರಣಾಗತಿಯಾಗಿದ್ದ ಹಿನ್ನೆಲೆಯಲ್ಲಿ, ಹಳೆಯ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿದೆ.
ಈ ಪ್ರಕರಣವು 2012ರಲ್ಲಿ ನಡೆದಿದ್ದು, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ಲೂರಿನ ಲಿಂಗಪ್ಪ ಮಲೆಕುಡಿಯ ಎಂಬವರ ಮನೆಯ ಅಂಗಳದಲ್ಲಿ ನಕ್ಸಲ್ ಸಿದ್ಧಾಂತದ ಕರಪತ್ರಗಳನ್ನು ಹಚ್ಚಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಇತ್ತೀಚೆಗೆ ಮರು ತನಿಖೆಗೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇರಳದ ವಿಶೇಷ ಪೊಲೀಸ್ ತಂಡವು ಆರೋಪಿಯನ್ನು ಬಿಗಿ ಬಂದೋಬಸ್ತ್ನೊಂದಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು.
ಜಯಣ್ಣ ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು, ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ನೀತಿಯಡಿ ಇತ್ತೀಚೆಗಷ್ಟೇ ಈತ ಮುಖ್ಯವಾಹಿನಿಗೆ ಬರಲು ಸಮ್ಮತಿಸಿ ಶರಣಾಗಿದ್ದನು. ಇದೀಗ ಕಾನೂನು ಪ್ರಕ್ರಿಯೆಯ ಭಾಗವಾಗಿ ಈತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









