ಮಂಗಳೂರು : ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಅವಧಿ ಮುಕ್ತಾಯಗೊಂಡು ಫೆಬ್ರವರಿ 27ಕ್ಕೆ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಕಳೆದ ಒಂದು ವರ್ಷದಿಂದ ಪಾಲಿಕೆಯು ಅಧಿಕಾರಿಗಳ ಆಡಳಿತಕ್ಕೊಳಪಟ್ಟಿದ್ದು, ಸದ್ಯಕ್ಕೆ ಚುನಾವಣೆ ನಡೆಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇತ್ತೀಚೆಗಷ್ಟೇ ನಗರಾಭಿವೃದ್ಧಿ ಸಚಿವರು ಮಾರ್ಚ್ನಲ್ಲಿ ಚುನಾವಣೆ ನಡೆಯುವ ಸುಳಿವು ನೀಡಿದ್ದರೂ, ವಾರ್ಡ್ ಮೀಸಲಾತಿ ಪ್ರಕಟಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಂತಹ ಪೂರಕ ಸಿದ್ಧತೆಗಳು ಇನ್ನೂ ಬಾಕಿ ಇವೆ. ಹೀಗಾಗಿ, ಪ್ರಜಾಪ್ರಭುತ್ವದ ಹಬ್ಬಕ್ಕೆ ಮಂಗಳೂರು ಜನತೆ ಇನ್ನು ಕೆಲವು ತಿಂಗಳು ಕಾಯುವುದು ಅನಿವಾರ್ಯವಾಗಿದೆ.
ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಜನಗಣತಿ ಕಾರ್ಯ ಆರಂಭವಾಗುವ ಸಾಧ್ಯತೆ ಇರುವುದರಿಂದ ಮತ್ತು ಆ ಬಳಿಕ ಮಳೆಗಾಲ ಎದುರಾಗುವುದರಿಂದ, ಚುನಾವಣೆ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದರೂ, ಜಿಲ್ಲಾಧಿಕಾರಿಗಳು ಆಯೋಜಿಸುತ್ತಿರುವ ಫೋನ್-ಇನ್ ಕಾರ್ಯಕ್ರಮಗಳು ಸದ್ಯಕ್ಕೆ ಅಹವಾಲು ಆಲಿಸಲು ವೇದಿಕೆಯಾಗಿವೆ.
ಇನ್ನು ಪಾಲಿಕೆಯ ಆರ್ಥಿಕ ವರ್ಷದ ಬಜೆಟ್ ಮಂಡನೆಗೆ ಸಿದ್ಧತೆಗಳು ಚುರುಕುಗೊಂಡಿದ್ದು, ಮುಂದಿನ ತಿಂಗಳು ಆಯವ್ಯಯ ಮಂಡನೆಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಸ್ಥಾಯೀ ಸಮಿತಿ ಅಧ್ಯಕ್ಷರು ಮಂಡಿಸುತ್ತಿದ್ದ ಬಜೆಟ್ ಅನ್ನು ಈ ಬಾರಿ ಜನಪ್ರತಿನಿಧಿಗಳಿಲ್ಲದ ಕಾರಣ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳೇ ಮಂಡಿಸಲಿದ್ದಾರೆ. ಈಗಾಗಲೇ ಸುರತ್ಕಲ್ ಮತ್ತು ಮಂಗಳೂರಿನಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಸಲಾಗಿದ್ದು, ಅಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳು ಪೂರ್ಣಗೊಂಡಿವೆ. ರಾಜ್ಯ ಬಜೆಟ್ ಬೆನ್ನಲ್ಲೇ ಮಂಗಳೂರು ಪಾಲಿಕೆಯ ಆಯವ್ಯಯವೂ ಅಧಿಕೃತವಾಗಿ ಹೊರಬೀಳಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









