ಬೆಂಗಳೂರು : ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ದಾವಣಗೆರೆ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸುತ್ತಾ, ಇದು ಪಕ್ಷದ ಆಂತರಿಕ ವಿಚಾರವೇ ಹೊರತು ಸಾರ್ವಜನಿಕ ಚರ್ಚೆಯ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಕ್ಕೂ ಮತ್ತು ಯಾರನ್ನೋ ಗುರಿಯಾಗಿಸಿ ಟಾರ್ಗೆಟ್ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಅಬ್ದುಲ್ ಜಬ್ಬರ್ ಅವರನ್ನು ಕೇವಲ ಅಮಾನತುಗೊಳಿಸಲಾಗಿದೆ, ಅವರಿಗೆ ಮತ್ತೆ ವಾಪಸ್ ಬರಲು ಅವಕಾಶವಿದೆ. ಆದರೆ, ಇಂತಹ ಕ್ರಮಗಳನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಜೋಡಿಸಿ ನೋಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷವು ಎಲ್ಲ ಜಾತಿ ಮತ್ತು ಧರ್ಮದವರಿಗೆ ಸಮಾನ ಅವಕಾಶ ನೀಡುವ ತತ್ವ ಹೊಂದಿದ್ದು, ಮುಸ್ಲಿಂ ಸಮುದಾಯಕ್ಕೆ ಈಗಾಗಲೇ ಅನೇಕ ಮಹತ್ವದ ಸ್ಥಾನಮಾನಗಳನ್ನು ನೀಡಿದೆ ಎಂದು ಅವರು ನೆನಪಿಸಿದರು.
ನಸೀರ್ ಅಹಮದ್ ಅವರಿಗೆ ಕಾಂಗ್ರೆಸ್ ಪಕ್ಷ ಮೂರು ಬಾರಿ ಎಂಎಲ್ಸಿ ಆಗುವ ಅವಕಾಶ ನೀಡಿದೆ ಮತ್ತು ಮುಖ್ಯಮಂತ್ರಿಯವರೇ ಅವರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಇದನ್ನು ಕೇವಲ ಒಲೈಕೆ ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವರು, ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವುದು ಪಕ್ಷದ ಉದ್ದೇಶ ಎಂದರು. ಇನ್ನು ಸಮುದಾಯದ ಒಳಗಿನ ಗುಂಪುಗಾರಿಕೆಯ ಬಗ್ಗೆ ಮಾತನಾಡುತ್ತಾ, ರಾಜಕೀಯದಲ್ಲಿ ಎಲ್ಲ ಸಮುದಾಯಗಳಲ್ಲೂ ಗುಂಪುಗಳು ಇರುವುದು ಸಹಜ. ವೀರಶೈವ ಅಥವಾ ಒಕ್ಕಲಿಗ ಸಮುದಾಯದಲ್ಲೂ ಇಂತಹ ಭಿನ್ನಾಭಿಪ್ರಾಯಗಳಿವೆ. ಬಿಜೆಪಿಯ ಯತ್ನಾಳ್ ಅವರು ತಮ್ಮದೇ ಸಮುದಾಯದ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದನ್ನು ನಾವು ನೋಡಿದ್ದೇವೆ. ಒಬ್ಬ ವ್ಯಕ್ತಿಯ ಮೇಲಿನ ಶಿಸ್ತು ಕ್ರಮ ಇಡೀ ಸಮುದಾಯದ ವಿರುದ್ಧದ ಕ್ರಮ ಎಂದು ಭಾವಿಸುವುದು ತಪ್ಪು ಎಂದು ಅವರು ತಿಳಿಸಿದರು.
ಇಡಿ (ಜಾರಿ ನಿರ್ದೇಶನಾಲಯ) ದಾಳಿಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಚುನಾವಣೆ ಹತ್ತಿರ ಬಂದಾಗಲೆಲ್ಲಾ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡುವುದು ಬಿಜೆಪಿಯ ಮಾಫಿಯಾ ಶೈಲಿಯ ತಂತ್ರವಾಗಿದೆ. ಇಡಿ ದಾಳಿಗೆ ಹೆದರಿ ಅನೇಕರು ಬಿಜೆಪಿ ಸೇರಿರುವ ಇತಿಹಾಸ ನಮ್ಮ ಕಣ್ಣ ಮುಂದಿದೆ. ಬಿಜೆಪಿ ಸೇರಿದರೆ ಎಲ್ಲರೂ ಶುದ್ಧಹಸ್ತರು, ಇಲ್ಲದಿದ್ದರೆ ದಾಳಿಯ ಭೀತಿ ಎಂಬಂತಾಗಿದೆ. ಆಪರೇಷನ್ ಕಮಲ ಮತ್ತು ಬ್ಲಾಕ್ಮೇಲ್ ರಾಜಕಾರಣದ ಮೂಲಕ ವಿರೋಧಿಗಳಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಕಾನೂನುಬದ್ಧ ಕ್ರಮಗಳಿಗೆ ನಮ್ಮ ವಿರೋಧವಿಲ್ಲ, ಆದರೆ ರಾಜಕೀಯ ದ್ವೇಷದ ದಾಳಿಗಳನ್ನು ಖಂಡಿಸುತ್ತೇವೆ ಎಂದು ಅವರು ಹೇಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜಕೀಯ, ಟಾಪ್ ಸುದ್ದಿ, ರಾಜ್ಯ ಸುದ್ದಿಗಳು, ಸುದ್ದಿಗಳು









