ಮಂಗಳೂರು : ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡು, ಬಿಸಿರೋಡ್ ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿಯೊಳಗೇ ಗಂಡು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಇಂದು ರಾತ್ರಿ ಜರುಗಿದೆ. ಮೈಸೂರು ಸವಣೂರು ನಿವಾಸಿ, ಮಂಗಳೂರಿನ ಖಾಸಗಿ ಆಸ್ಪತ್ರೆಯ ಉದ್ಯೋಗಿ ಎನ್ನಲಾದ ಪೊನ್ನಮ್ಮ ಎಂಬವರೇ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ. ಮಂಗಳೂರಿನಲ್ಲಿ ರೈಲು ಹತ್ತಿದ ಕೆಲವೇ ನಿಮಿಷಗಳಲ್ಲಿ ಅವರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಸಹಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆ ಮೆಚ್ಚುವಂತದ್ದಾಗಿತ್ತು.
ರೈಲಿನಲ್ಲಿ ಪೊನ್ನಮ್ಮ ಅವರಿಗೆ ನೋವು ಕಾಣಿಸಿಕೊಂಡಾಗ ಅದೇ ಬೋಗಿಯಲ್ಲಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ತಕ್ಷಣ ಕಾರ್ಯಪ್ರವೃತ್ತರಾಗಿ ಅವರಿಗೆ ಧೈರ್ಯ ತುಂಬಿ ಉಪಚರಿಸಿದ್ದಾರೆ. ಅಷ್ಟೇ ಅಲ್ಲದೆ, ಕೂಡಲೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ. ರೈಲ್ವೆ ಇಲಾಖೆಯು ತುರ್ತಾಗಿ ಸ್ಪಂದಿಸಿ, ಬಿಸಿರೋಡ್ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ವೈದ್ಯಕೀಯ ನೆರವಿಗೆ ವ್ಯವಸ್ಥೆ ಮಾಡಿತು. ಈ ಸಂದರ್ಭದಲ್ಲಿ ಕಲ್ಲಡ್ಕದ ಸುಜ್ಞಾನ ಅಂಬ್ಯುಲೆನ್ಸ್ ಚಾಲಕ ಲೋಕೇಶ್ ಅವರು ಕೇವಲ ಮೂರೇ ನಿಮಿಷಗಳಲ್ಲಿ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ನಿಲ್ದಾಣಕ್ಕೆ ಕರೆತರುವ ಮೂಲಕ ದೊಡ್ಡ ಮಟ್ಟದ ಸಹಕಾರ ನೀಡಿದರು.
ರೈಲು ಬೋಗಿಯನ್ನೇ ಹೆರಿಗೆ ಕೊಠಡಿಯನ್ನಾಗಿ ಪರಿವರ್ತಿಸಿದ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ. ಬಳಿಕ ತಾಯಿ ಮತ್ತು ಮಗುವನ್ನು ಅಂಬ್ಯುಲೆನ್ಸ್ ಮೂಲಕ ಸೋಮಯಾಜಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ಇಬ್ಬರೂ ಆರೋಗ್ಯವಾಗಿದ್ದರೂ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾನವೀಯ ಕಾರ್ಯಕ್ಕೆ ಕೈಕಂಬದ ಸಮಾದ್, ಬಂಟ್ವಾಳ ನಗರ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೈಜೋಡಿಸಿದ್ದರು. ಸುಮಾರು ಒಂದು ಗಂಟೆ ಕಾಲ ನಿಲ್ದಾಣದಲ್ಲಿ ತಡೆಹಿಡಿಯಲ್ಪಟ್ಟಿದ್ದ ರೈಲು, ಹೆರಿಗೆ ಪ್ರಕ್ರಿಯೆ ಮುಗಿದು ತಾಯಿ-ಮಗುವನ್ನು ಆಸ್ಪತ್ರೆಗೆ ರವಾನಿಸಿದ ನಂತರ 8.20ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









