ಮಂಗಳೂರು: ನಗರದ ಬೋಳಾರ ಪರಿಸರದಲ್ಲಿ ‘ಅವೇಕ್ ಕುಡ್ಲ’ ಟ್ರಸ್ಟ್ನ ವಿಶಿಷ್ಟ ಪರಿಕಲ್ಪನೆಯಡಿಯಲ್ಲಿ ಜೂನ್ 29ರ ಭಾನುವಾರ ಮಹತ್ವದ ‘ಸ್ವಚ್ಛತಾ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿತ್ತು. ವಿಜಯ ಗೇಮ್ಸ್ ಟೀಮ್ (ರಿ.) ಬೋಳಾರ ಹಾಗೂ ಕಾಸ್ಸಿಯಾ ಪ್ರೌಢ ಶಾಲೆಯ ಗೈಡ್ಸ್ ವಿಭಾಗದ ಜಂಟಿ ಸಹಯೋಗದೊಂದಿಗೆ ನಡೆದ ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಯಿತು. ವಿಜಯ ಗೇಮ್ಸ್ ಟೀಮ್ ತಂಡದ ಅಧ್ಯಕ್ಷರಾದ ಮನೋಜ್ ಕೋಟ್ಯಾನ್ ಅವರ ನೇತೃತ್ವದ ಒಂದು ತಂಡವು ಬೋಳಾರ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬೋಳಾರ ಕೆಡವಿನ ಬಾಗಿಲು ರಸ್ತೆಯವರೆಗಿನ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪೇಪರ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿತು. ಇದೇ ವೇಳೆ, ಸಂಸ್ಥೆಯ ಉಪಾಧ್ಯಕ್ಷರಾದ ದೀಪಕ್ ಸುವರ್ಣ ಮತ್ತು ಪ್ರವೀಣ್ ಅವರ ನೇತೃತ್ವದ ಮತ್ತೊಂದು ತಂಡವು ನೇತ್ರಾವತಿ ನದಿ ತಟದಲ್ಲಿದ್ದ ಅಪಾಯಕಾರಿ ಥರ್ಮಕಾಲ್ ಹಾಗೂ ಇತರೆ ಕಸ-ಕಡ್ಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.
ಪರಿಸರ ಸ್ವಚ್ಛತೆಯ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಸ್ಸಿಯಾ ಪ್ರೌಢ ಶಾಲೆಯ ಗೈಡ್ಸ್ ಕ್ಯಾಪ್ಟನ್ ಪ್ರೀತಿ ಲೋಬೊ ಹಾಗೂ ಅಂಗನವಾಡಿ ಕಾರ್ಯಕರ್ತೆ ಶೋಭಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಕ್ರಿಯವಾಗಿ ತೊಡಗಿಸಿಕೊಂಡರು. ಬೋಳಾರ ರಸ್ತೆಯ ಅಂಗಡಿ-ಮುಂಗಟ್ಟುಗಳಿಗೆ ಭೇಟಿ ನೀಡಿದ ಗೈಡ್ಸ್ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಕಸದ ಡಬ್ಬಿಗಳನ್ನು ಇಡುವಂತೆ ಮಾಲೀಕರಲ್ಲಿ ವಿನಂತಿಸಿದರು. ಅಲ್ಲದೆ, ಸ್ಥಳೀಯ ಮನೆ ಮನೆಗಳಿಗೆ ತೆರಳಿ ಒಣ ಹಾಗೂ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸುವ ವಿಧಾನ ಮತ್ತು ಅದನ್ನು ಕಡ್ಡಾಯವಾಗಿ ಮಹಾನಗರ ಪಾಲಿಕೆಯ ವಾಹನಗಳಿಗೇ ನೀಡುವಂತೆ ಜನರಲ್ಲಿ ಮನವರಿಕೆ ಮಾಡಿಕೊಟ್ಟರು. ಈ ಅಭಿಯಾನಕ್ಕೆ ಪೂರಕವಾಗಿ ಮಂಗಳೂರು ನಗರ ಪಾಲಿಕೆಯ ವತಿಯಿಂದ ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದಿದ್ದ ಹಾನಿಕಾರಕ ಹುಲ್ಲುಗಳನ್ನು ಕಟಾವು ಮಾಡಲಾಯಿತು.
ಕೇವಲ 500ರಿಂದ 600 ಮೀಟರ್ ರಸ್ತೆಯಲ್ಲೇ ನಿರ್ಲಕ್ಷ್ಯದಿಂದ ಬಿದ್ದಿದ್ದ ಅಪಾರ ಪ್ರಮಾಣದ ಕಸವನ್ನು ಕೇವಲ ಕೈಯಿಂದಲೇ ಹೆಕ್ಕಿ ತೆಗೆಯಲಾಗಿದ್ದು, ಇಡೀ ನಗರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಟ್ರಸ್ಟಿನ ಕಾರ್ಯಕ್ರಮ ಸಂಯೋಜಕರಾದ ಪುನೀತ್ ಅವರು ಅಭಿಪ್ರಾಯಪಟ್ಟರು. ಜನರು ಎಲ್ಲೆಂದರಲ್ಲಿ ಕಸ ಎಸೆಯದೆ ‘ನಮ್ಮ ಕಸ-ನಮ್ಮ ಜವಾಬ್ದಾರಿ’ ಎಂದು ಅರಿತುಕೊಳ್ಳಬೇಕು. ಕಸದ ಡಬ್ಬಿ ಲಭ್ಯವಿಲ್ಲದಿದ್ದರೆ ಆ ತ್ಯಾಜ್ಯವನ್ನು ತಮ್ಮ ಮನೆ ಅಥವಾ ಕಚೇರಿಗಳಿಗೆ ಕೊಂಡೊಯ್ದು ಸರಿಯಾಗಿ ವಿಲೇವಾರಿ ಮಾಡಬೇಕು. ಇದರೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯು ನಗರದ ಎಲ್ಲಾ ಪ್ರಮುಖ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಿ ಸೂಕ್ತವಾಗಿ ನಿರ್ವಹಿಸಬೇಕಿದೆ ಎಂದು ಅವರು ಒತ್ತಾಯಿಸಿದರು.
ನಿರಂತರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಅತ್ಯಂತ ಉತ್ಸಾಹದಿಂದ ಸಾಗಿದ ಈ ಅಭಿಯಾನದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟಿನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್ ಅವರು ಮಾತನಾಡಿ, ಸ್ಥಳೀಯ ಸಂಘ-ಸಂಸ್ಥೆಗಳು ತಮ್ಮ ಪರಿಸರದ ಸಮಸ್ಯೆಗಳನ್ನು ಕೇವಲ ವೈಭವೀಕರಿಸದೆ ಅವುಗಳ ಪ್ರಾಯೋಗಿಕ ಪರಿಹಾರದ ಕಡೆಗೆ ನೇರವಾಗಿ ಗಮನಹರಿಸುವುದೇ ‘ಅವೇಕ್ ಕುಡ್ಲ’ದ ನೈಜ ಉದ್ದೇಶ ಎಂದರು. ಅಭಿಯಾನದಲ್ಲಿ ಟ್ರಸ್ಟ್ ಸದಸ್ಯರಾದ ರಾಮ ದೇವಾಡಿಗ, ಸರಿತಾ, ವಿಶ್ವಕರ್ಮ ಸಹಕಾರಿ ಬ್ಯಾಂಕ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್, ವಿಜಯ ಗೇಮ್ಸ್ ಟೀಮ್ನ ಹಿರಿಯ ಸದಸ್ಯರಾದ ಗಣೇಶ್, ಸುಧೀರ್ ಬೋಳಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಶ್ರಮದಾನವನ್ನು ಯಶಸ್ವಿಗೊಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










