ಧರ್ಮಸ್ಥಳ : ವಿಜಯನಗರ ಜಿಲ್ಲೆಯ ಐತಿಹಾಸಿಕ ತಾಣ ಹಂಪಿಯಿಂದ ಹೊರಟ 65 ಮಂದಿ ಉತ್ಸಾಹಿ ಯುವಕರ ತಂಡವೊಂದು ಬರೊಬ್ಬರಿ 380 ಕಿಲೋಮೀಟರ್ ಸೈಕಲ್ ತುಳಿದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪುವ ಮೂಲಕ ಭಕ್ತಿ, ಶಿಸ್ತು ಮತ್ತು ಆರೋಗ್ಯದ ಮಹತ್ವವನ್ನು ಸಾರಿದೆ. ಧರ್ಮಸ್ಥಳಕ್ಕೆ ಆಗಮಿಸಿದ ಈ ಸೈಕಲ್ ಜಾಥಾದ ಯುವಕರನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯದರ್ಶಿ ಎ. ವಿ. ಶೆಟ್ಟಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಅವರ ಸಾಹಸ ಹಾಗೂ ಭಕ್ತಿಗೆ ಶುಭ ಹಾರೈಸಿದರು.
ಕಳೆದ 36 ವರ್ಷಗಳ ಹಿಂದೆ ಹಿರಿಯರು ಆರಂಭಿಸಿದ ಈ ಅಪೂರ್ವ ಸೈಕಲ್ ಭಕ್ತಿ ಜಾಥಾದ ಪರಂಪರೆಯನ್ನು ಇಂದಿನ ಯುವ ಪೀಳಿಗೆಯು ಅದೇ ಶ್ರದ್ಧೆ, ನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ. ಹಾದಿಯುದ್ದಕ್ಕೂ ನೂರಾರು ಹಳ್ಳಿಗಳ ಮೂಲಕ ಹಾದುಹೋಗುವ ಈ ಜಾಥಾ, ಸಾರ್ವಜನಿಕರಲ್ಲಿ ಸದಾಚಾರ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತವಾಗಿದೆ.
ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಹಾಗೂ ಶಿಸ್ತುಬದ್ಧ ಜೀವನವನ್ನು ನಡೆಸಬೇಕೆಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಈ ಸೈಕಲ್ ಯಾತ್ರೆಯ ಮೂಲ ಉದ್ದೇಶವಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಯುವಕರು, ಭಕ್ತಿಪೂರ್ವಕ ಅನುಭವದೊಂದಿಗೆ ತಮ್ಮ ಊರುಗಳಿಗೆ ಮರಳಲಿದ್ದಾರೆ. ಕೇವಲ ದೈಹಿಕ ವ್ಯಾಯಾಮಕ್ಕಷ್ಟೇ ಸೀಮಿತವಾಗದೆ ಯುವಶಕ್ತಿ, ಭಕ್ತಿ ಹಾಗೂ ಸಂಸ್ಕೃತಿಯನ್ನು ಬೆಸೆಯುವ ಈ ಯಾತ್ರೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









