ಮಂಗಳೂರು : ಮಂಗಳೂರಿನ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಮೂರನೇ ಹಂತದ ಘಟಕದಲ್ಲಿ ಸಂಭವಿಸಿರುವ ಭಾರಿ ಸ್ಫೋಟವು ಅತ್ಯಂತ ಭೀಕರವಾಗಿದ್ದು, ಕಂಪನಿ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ಹೇಳಿಕೆಗಳಿಗಿಂತಲೂ ಘಟನೆಯ ತೀವ್ರತೆ ಹಲವು ಪಟ್ಟು ಗಂಭೀರವಾಗಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಗಂಭೀರ ಆರೋಪ ಮಾಡಿದೆ. ಈ ಹಿಂದೆಯೂ ಎಂಆರ್ಪಿಎಲ್ನಲ್ಲಿ ಹಲವು ಅವಘಡಗಳು ಸಂಭವಿಸಿ ಪ್ರಾಣಹಾನಿಯಾಗಿದ್ದರೂ ಕಂಪನಿಯು ಸ್ಫೋಟದ ತೀವ್ರತೆಯನ್ನು ಎಂದಿನಂತೆ ಲಘುವಾಗಿ ಬಿಂಬಿಸಲು ಯತ್ನಿಸುತ್ತಿದೆ. ಕಂಪನಿಯ ನಿರಂತರ ನಿರ್ಲಕ್ಷ್ಯ, ದುರಹಂಕಾರದ ನಡವಳಿಕೆ, ಸುರಕ್ಷತಾ ಹಾಗೂ ಪರಿಸರ ನಿಯಮಗಳ ಉಲ್ಲಂಘನೆ ವಿರುದ್ಧ ಜಿಲ್ಲಾಡಳಿತ ತಾಳುತ್ತಿರುವ ಮೃದು ಧೋರಣೆ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಇಂದಿನ ದುರಂತಕ್ಕೆ ಮುಖ್ಯ ಕಾರಣ ಎಂದು ಸಿಪಿಐಎಂ ಮುಖಂಡರು ಕಿಡಿಕಾರಿದ್ದಾರೆ.
ಇಂದು ಸ್ಫೋಟ ಸಂಭವಿಸಿರುವ ಮೂರನೇ ಹಂತದ ಕೋಕ್ ಸಲ್ಫರ್ ಘಟಕವು ನಿಯಮಗಳ ಉಲ್ಲಂಘನೆಗೆ ಹೆಸರಾಗಿದೆ. ಕಡ್ಡಾಯ ಹಸಿರು ವಲಯ (ಗ್ರೀನ್ ಬೆಲ್ಟ್) ಇಲ್ಲದೆಯೇ ಕಾರ್ಯಾಚರಿಸುತ್ತಿರುವ ದೇಶದ ಏಕೈಕ ಬೃಹತ್ ಕೈಗಾರಿಕಾ ಘಟಕ ಇದಾಗಿದೆ. 2014ರಲ್ಲಿ ಈ ಘಟಕ ಆರಂಭಗೊಂಡಾಗಿನಿಂದಲೂ ಜೋಕಟ್ಟೆ ಮತ್ತು ಕಳವಾರು ನಿವಾಸಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದು, ಮಾಲಿನ್ಯದ ಕಾರಣದಿಂದ ಈ ಗ್ರಾಮಗಳು ನರಕಸದೃಶವಾಗಿ ಮಾರಕ ರೋಗಗಳ ಗೂಡಾಗಿ ಪರಿಣಮಿಸಿವೆ. 2016ರಲ್ಲಿ ಗ್ರಾಮಸ್ಥರ ಸುದೀರ್ಘ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ 6 ಅಂಶಗಳ ಆದೇಶವನ್ನು ಜಾರಿಗೊಳಿಸದೆ ಎಂಆರ್ಪಿಎಲ್ ಸತಾಯಿಸುತ್ತಿದ್ದರೂ, ಜಿಲ್ಲಾಡಳಿತವು ಸಂತ್ರಸ್ತ ಜನರ ಪರವಾಗಿ ನಿಲ್ಲದೆ ಕಂಪನಿಯ ಪರ ವಹಿಸುತ್ತಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ದೂರುಗಳನ್ನು ಮತ್ತು ಸುರಕ್ಷತಾ ನಿಯಮಗಳನ್ನು ಸಾಲು ಸಾಲಾಗಿ ನಿರ್ಲಕ್ಷಿಸಿದ ಒಟ್ಟು ಪರಿಣಾಮವೇ ಇಂದಿನ ಭೀಕರ ಸ್ಫೋಟದ ಮೂಲಕ ಹೊರಬಿದ್ದಿದೆ. ಆದ್ದರಿಂದ ಈ ತೀವ್ರ ಸ್ಫೋಟದ ಕುರಿತು ತಕ್ಷಣವೇ ಉನ್ನತ ಮಟ್ಟದ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ಸ್ಫೋಟದ ರಭಸಕ್ಕೆ ಸಾರ್ವಜನಿಕರ ಮನೆ ಮತ್ತು ಕಟ್ಟಡಗಳಿಗೆ ಆಗಿರುವ ಸಂಪೂರ್ಣ ಹಾನಿಗೆ ಎಂಆರ್ಪಿಎಲ್ ಕಂಪನಿಯಿಂದಲೇ ಸೂಕ್ತ ನಷ್ಟಪರಿಹಾರ ಕೊಡಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









