ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆನೆದೋಡಿ ಎಂಬಲ್ಲಿ ಸೋಮವಾರ ಮುಂಜಾನೆ ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಆನೆದೋಡಿ ನಿವಾಸಿ ನಾಗೇಶ್ ಕುಲಾಲ್ ಅವರ ಮನೆಗೆ ಮುಂಜಾನೆ ಸಿಡಿಲು ಬಡಿದಿದ್ದು, ಸಿಡಿಲಿನ ತೀವ್ರತೆಗೆ ಮನೆಯ ಕಟ್ಟಡ ಹಾಗೂ ಮನೆಯೊಳಗಿನ ವಸ್ತುಗಳಿಗೆ ಹಾನಿಯಾಗಿದೆ. ಮನೆ ಸಂಪೂರ್ಣ ಹಾನಿಗೊಂಡಿರುವುದಾಗಿ ತಿಳಿದುಬಂದಿದೆ.
ಘಟನೆಯಲ್ಲಿ ನಾಗೇಶ್ ಕುಲಾಲ್ ಅವರ ಪತ್ನಿ ಕುಸಲಾಕ್ಷಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕರ ಭೇಟಿ: ಸಿಡಿಲು ಬಡಿದು ಹಾನಿಗೊಂಡಿರುವ ನಾಗೇಶ್ ಕುಲಾಲ್ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಮನೆಯ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ತುರ್ತಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಸಲಾಕ್ಷಿ ಅವರ ಆರೋಗ್ಯ ವಿಚಾರಿಸಿ ವೈದ್ಯರಿಂದ ಚಿಕಿತ್ಸೆಯ ಕುರಿತು ಮಾಹಿತಿ ಪಡೆದರು.
ಈ ಸಂದರ್ಭ ಯುವ ಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರು, ಪುರುಷೋತ್ತಮ ಶೆಟ್ಟಿ ಬರಕ್ಕಿನಡೆ, ಶ್ಯಾಮ್ ಪ್ರಸಾದ್ ಪೂಂಜಾ, ರವಿರಾಮ್ ಶೆಟ್ಟಿ ಕಂಚಾರು, ಮುತ್ತಮ್ಮ ಕುಲಾಲ್, ನರೇಂದ್ರ ಕುಲಾಲ್, ಪ್ರಶಾಂತ್ ಪೂಜಾರಿ ಪಡ್ಡಾಯಿ ಬಾಕಿಮಾರು, ಉಮೇಶ್ ಶೆಟ್ಟಿ ಭಂಡಾರಿಬೆಟ್ಟು, ಗಣನಾಥ್ ಶೆಟ್ಟಿ ಕೊರಗಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









