ಉಜಿರೆ : ಯಾವುದೇ ಧ್ವನಿವರ್ಧಕಗಳ ಅಬ್ಬರ, ಸಿನಿಮಾ ಹಾಡು ಅಥವಾ ನೃತ್ಯದ ಗದ್ದಲವಿಲ್ಲದೆ ಅತ್ಯಂತ ಸರಳ ಹಾಗೂ ಶಿಸ್ತುಬದ್ಧವಾಗಿ ವಿವಾಹ ಸಂಭ್ರಮದ ಸ್ನೇಹಕೂಟವನ್ನು ಆಯೋಜಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಸಿಇಒ ಕೆ.ಎನ್. ಜನಾರ್ಧನ ಮತ್ತು ಉಷಾ ಜನಾರ್ಧನ ದಂಪತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ದ್ವಿತೀಯ ಪುತ್ರ ಕೆ.ಜೆ. ಸುದರ್ಶನ್ ಮತ್ತು ದಿವ್ಯಾ ಅವರ ವಿವಾಹವನ್ನು ನೆರವೇರಿಸಿದ್ದ ದಂಪತಿ, ಸ್ಥಳೀಯ ಆಪ್ತರು, ಹಿತೈಷಿಗಳು ಹಾಗೂ ಸಿಬ್ಬಂದಿಗಾಗಿ ಭಾನುವಾರ ಬೆಳ್ತಂಗಡಿಯ ಮಂಜುನಾಥಸ್ವಾಮಿ ಕಲಾಭವನದಲ್ಲಿ ಈ ಅರ್ಥಪೂರ್ಣ ಸ್ನೇಹಕೂಟವನ್ನು ಏರ್ಪಡಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ವರ ಕೆ.ಜೆ. ಸುದರ್ಶನ್, ತಮ್ಮ ತಂದೆ-ತಾಯಿಯೇ ತಮಗೆ ಪ್ರತ್ಯಕ್ಷ ದೇವರು ಎಂದು ಹೆತ್ತವರ ಬಗೆಗಿನ ಅಪಾರ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಪುತ್ರನ ಈ ಭಾವನಾತ್ಮಕ ನುಡಿಗಳನ್ನು ಕೇಳಿ ಭಾವುಕರಾದ ಕೆ.ಎನ್. ಜನಾರ್ಧನ ಮತ್ತು ಉಷಾ ಜನಾರ್ಧನ ದಂಪತಿ ಆನಂದಭಾಷ್ಪ ಸುರಿಸಿದರಲ್ಲದೆ, ಇಂತಹ ಸಂಸ್ಕಾರಯುತ ಮಗನನ್ನು ಪಡೆದ ತಾವೇ ಧನ್ಯರು ಎಂದು ಸಂತಸ ಹಂಚಿಕೊಂಡರು. ಇದೇ ವೇಳೆ ಉಷಾ ಜನಾರ್ಧನ ಅವರು ಸುಶ್ರಾವ್ಯವಾಗಿ ಗಣೇಶ ಸ್ತುತಿಯನ್ನು ಹಾಡಿ, ಸೊಸೆಯನ್ನು ಸ್ವಂತ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಹಿರಿಯ ದಂಪತಿ ಹಾಗೂ ನವದಂಪತಿ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು, ಶುಚಿ-ರುಚಿಯಾದ ಸರಳ ಶಾಕಾಹಾರ ಭೋಜನದೊಂದಿಗೆ ಸತ್ಕರಿಸಿದರು.
ಈ ಶುಭ ಸಮಾರಂಭದಲ್ಲಿ ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೇಟ್ನಾಯ, ಶಾಸಕ ಕೆ. ಹರೀಶ್ ಪೂಂಜ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ರಶ್ಮಿತಾ ಜೈನ್ ನಾರಾವಿ ಸೇರಿದಂತೆ ಹಲವಾರು ಗಣ್ಯರು, ಹಿರಿಯರು ಪಾಲ್ಗೊಂಡು ನವದಂಪತಿಗೆ ಶುಭ ಹಾರೈಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









