ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಬ್ಬ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳ ಆಚರಣೆಗಾಗಿ ಕೆಲವು ಷರತ್ತುಗಳನ್ನು ವಿಧಿಸಿದ್ದು, ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.
ಮುಂದಿನ ದಿನಗಳಲ್ಲಿ ಮುಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ, ಗಣೇಶ ಚತುರ್ಥಿ ಮತ್ತಿತರ ಹಬ್ಬಗಳು ನಡೆಯಲಿವೆ. ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ದೃಷ್ಠಿಯಿಂದ ಕೆಲವು ಷರತ್ತುಗಳನ್ನು ಪಾಲಿಸಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ.
ಈ ಸಂಬಂಧ, ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಠಿಯಿಂದ ಈ ಕೆಳಗಿನ ಷರತ್ತುಗಳನ್ನು ಹೊರಡಿಸಲಾಗುತ್ತದೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಎಲ್ಲ ಆಯೋಜಕರು ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಹಬ್ಬದ ಮುಂಚಿತವಾಗಿ ನಿಖರವಾದ ಮಾರ್ಗಸೂಚಿಗಳನ್ನು (ರಸ್ತೆ, ಸಮಯ, ಧ್ವನಿ ನಿಯಂತ್ರಣ) ಹೊರಡಿಸಲಾಗುತ್ತದೆ. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಷರತ್ತುಗಳ ಉಲ್ಲಂಘನೆ ಅಥವಾ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರಲಿದೆ.
ಪೊಲೀಸ್ ಹಾಗೂ ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಯ ನಂತರ ಯಾವುದೇ ಮೆರವಣಿಗೆಯನ್ನು ನಡೆಸಲು ಅನುಮತಿಸಲಾಗದು. ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲೀಕರಿಂದ ನಿರಾಕ್ಷೇಪಣಾ ಪತ್ರ’ (NOC) ಪಡೆದು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅನುಮೋದಿತ ಸ್ಥಳ ಅಥವಾ ಮಾರ್ಗದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಯಾವುದೇ ವ್ಯತಿರಿಕ್ತತೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.
ಉಲ್ಲಂಘನೆ: ಭಾರತೀಯ ನ್ಯಾಯ ಸಂಹಿತ 2023 ರ ಕಲಂ: 189 (ಕಾನೂನುಬಾಹಿರ ಕೂಟ) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ: 92(1) (ಸಾರ್ವಜನಿಕ ಶಾಂತಿಯ ಉಲ್ಲಂಘನೆ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯುವುದು ಅಗತ್ಯವಿದೆ ಮತ್ತು ರಾತ್ರಿ 10:00 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಟ್ಟಗಳು ಈ ಮಿತಿಗಳ ಒಳಗಿರಬೇಕು: ವಾಣಿಜ್ಯ ಪ್ರದೇಶ – 65 ಡೆಸಿಬಲ್, ವಾಸಸ್ಥಳ – 55 ಡೆಸಿಬಲ್, ನಿಶ್ಯಬ್ದ ವಲಯ – 50 ಡೆಸಿಬಲ್.
ಉಲ್ಲಂಘನೆ: ಕಲಂ: 270 ಮತ್ತು ಕಲಂ: 223 ಭಾರತೀಯ ನ್ಯಾಯ ಸಂಹಿತೆ 2023 (ಸಾರ್ವಜನಿಕ ಉಪದ್ರವ ಮತ್ತು ಆದೇಶಕ್ಕೆ ಅವಿಧೇಯತೆ), ಪರಿಸರ ಸಂರಕ್ಷಣಾ ಕಾಯ್ದೆ 1986 ರ ಕಲಂ: 15, ಶಬ್ದ ಮಾಲಿನ್ಯ ನಿಯಮಗಳು 2000, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 31 ಮತ್ತು ಸ್ಫೋಟಕಗಳ ಕಾಯ್ದೆ 1884 ಅಡಿಯಲ್ಲಿ ಕ್ರಮ.
ಆಯೋಜಕರು ಸ್ಥಳದಲ್ಲಿ 24×7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು.
ಉಲ್ಲಂಘನೆ: ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 31, 34, 70 ಮತ್ತು ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕ್ರಮಗಳು (ಕ್ರಮಗಳು) ಕಾಯ್ದೆ, 2017 ರ ಕಲಂ: 3(1) ಮತ್ತು 6 ಅಡಿಯಲ್ಲಿ ಕ್ರಮ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









