ಉಡುಪಿ : ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸತತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ 25 ವರ್ಷದ ರೌಡಿಶೀಟರ್ ಮೊಹಮ್ಮದ್ ಅಲ್ಫಾಜ್ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ ವಿವರವಾದ ವರದಿಯನ್ನು ಪರಿಶೀಲಿಸಿದ ಉಡುಪಿ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಏಪ್ರಿಲ್ 24ರ ಶುಕ್ರವಾರದಂದು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಬಂಧಿತ ಅಲ್ಫಾಜ್ ಮೂಲತಃ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಕ್ರಾಸ್ ನಿವಾಸಿಯಾಗಿದ್ದು, ಕುಂದಾಪುರದ ರಾಮಮಂದಿರದ ಬಳಿಯೂ ವಾಸವಾಗಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಈತ ಕುಖ್ಯಾತ “ಗರುಡ ಗ್ಯಾಂಗ್” ನ ಸಕ್ರಿಯ ಸದಸ್ಯನಾಗಿದ್ದು, ಉಡುಪಿ ಮಾತ್ರವಲ್ಲದೆ ನೆರೆಯ ಉತ್ತರ ಕನ್ನಡ ಜಿಲ್ಲೆಯಲ್ಲೂ ತನ್ನ ಕ್ರಿಮಿನಲ್ ಜಾಲವನ್ನು ವಿಸ್ತರಿಸಿದ್ದನು. ಈತನ ಅಟ್ಟಹಾಸವನ್ನು ಹತ್ತಿಕ್ಕಲು ಜಿಲ್ಲಾಡಳಿತ ಈ ಕಠಿಣ ಕ್ರಮ ಕೈಗೊಂಡಿದೆ.
ಅಲ್ಫಾಜ್ ವಿರುದ್ಧ ಶಿರ್ವ, ಗಂಗೊಳ್ಳಿ, ಬೈಂದೂರು, ಕುಂದಾಪುರ ಹಾಗೂ ಭಟ್ಕಳ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಗಂಭೀರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎರಡು ಕೊಲೆ ಯತ್ನ, ದರೋಡೆ, ಅಪಹರಣ, ಹಲ್ಲೆ ಹಾಗೂ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಎನ್ಡಿಪಿಎಸ್ (NDPS) ಕಾಯ್ದೆಯ ಅಡಿಯಲ್ಲಿನ ಪ್ರಕರಣಗಳು ಸೇರಿವೆ. ಸದ್ಯ ಒಂದು ಪ್ರಕರಣದಲ್ಲಿ ಖುಲಾಸೆಗೊಂಡಿದ್ದರೂ, ಉಳಿದ ಒಂಬತ್ತು ಪ್ರಕರಣಗಳು ತನಿಖೆ ಮತ್ತು ವಿಚಾರಣಾ ಹಂತದಲ್ಲಿವೆ. ಜಿಲ್ಲಾಧಿಕಾರಿಗಳ ಆದೇಶದಂತೆ ಆರೋಪಿಯನ್ನು ಸದ್ಯ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









