ಉಡುಪಿ : ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಜಾಗೃತಿ ಹಾಗೂ ಫಿಟ್ನೆಸ್ ಉದ್ದೇಶಕ್ಕಾಗಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಓಟವು ದುರಂತದಲ್ಲಿ ಅಂತ್ಯಗೊಂಡಿದೆ. ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಮತ್ತು ‘ಫಿಟ್ನೆಸ್ ಡಬ್ ಫ್ರೀ ಕರ್ನಾಟಕ’ ಅಭಿಯಾನದಡಿ ಆಯೋಜಿಸಲಾಗಿದ್ದ 5 ಕಿ.ಮೀ ಓಟದಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ (58) ಅವರು ಓಡುತ್ತಿರುವಾಗಲೇ ಒಮ್ಮೆಲೆ ಕುಸಿದು ಬಿದ್ದು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತ ನಾಸಿರ್ ಹುಸೇನ್ ಅವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು. ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ ಮತ್ತು ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಅವರು, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಕೂಡ ದಕ್ಷತೆಯಿಂದ ಕರ್ತವ್ಯ ನಿಭಾಯಿಸಿದ್ದರು. ರವಿವಾರ ಬೆಳಿಗ್ಗೆ ನಡೆದ ಈ ಆಕಸ್ಮಿಕ ಘಟನೆಯಿಂದ ಜಿಲ್ಲಾ ಪೊಲೀಸ್ ಪಡೆಯಲ್ಲಿ ಶೋಕದ ಛಾಯೆ ಆವರಿಸಿದ್ದು, ಸಹೋದ್ಯೋಗಿಗಳು ಅತೀವ ಕಂಬನಿ ಮಿಡಿದಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









