ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಕ್ಕೆ ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಚಲಿಸುವ ಎರಡು ನೂತನ ವೋಲ್ವೊ ಮಲ್ಟಿ ಅಕ್ಸೆಲ್ ಸೀಟರ್ ಹಾಗೂ ಮೂರು ನೂತನ ಅಂಬಾರಿ ಉತ್ಸವ ಬಸ್ಗಳಿಗೆ ವಿಭಾಗದ ಬಿಜೈ ನಿಲ್ದಾಣದಲ್ಲಿ ರವಿವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ನಿಗಮದ ಕೆಲವು ಬಸ್ ನಿಲ್ದಾಣಗಳು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ. ಮಂಗಳೂರು ವಿಭಾಗದಲ್ಲಿ ಸುಮಾರು 6.5 ಎಕರೆ ಜಮೀನು ಇದ್ದು, ಇಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ತುಂಬಾ ಅವಕಾಶಗಳಿವೆ. ಈ ಕುರಿತು ಸಾರಿಗೆ ಸಚಿವರ ಜತೆ ಸಮಾಲೋಚನೆ ನಡೆಸುತ್ತೇನೆ ಎಂದು ಐವನ ಡಿಸೋಜ ಹೇಳಿದರು.
ಜನರ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮಿದೆ. ಇಂತಹ ಪ್ರಗತಿಯಲ್ಲಿ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಮುಖ್ಯ ಪಾತ್ರ ವಹಿಸಿದೆ. ಶಕ್ತಿ ಯೋಜನೆ ಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರಕಾರ ಈಗಾಗಲೇ 12,600 ಕೋ.ರೂ. ವೆಚ್ಚ ಮಾಡಿದೆ. ಮಹಿಳೆಯರ ಉಳಿತಾಯ ಕುಟುಂಬದ ಸ್ಥಿತಿಯನ್ನು ಉತ್ತಮ ಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ ಪ್ರಥಮ ಬಾರಿಗೆ ವಿಭಾಗದಿಂದ ಹಗಲು ವೇಳೆ ಬೆಂಗಳೂರಿಗೆ ಹವಾನಿಯಂತ್ರಿತ ಸ್ಲೀಪರ್ ಬಸ್ ಪರಿಚಯಿಸಲಾಗುತ್ತಿದೆ. ಈ ಹಿಂದೆ ಹಗಲು ವೇಳೆ ಎಸಿ ಸ್ಲೀಪರ್ ಇರಲಿಲ್ಲ. ಮಂಗಳೂರು-ಬೆಂಗಳೂರು ಅಂಬಾರಿ ಉತ್ಸವ ಮಧ್ಯಾಹ್ನ 1ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8:30ಕ್ಕೆ ಬೆಂಗಳೂರು ತಲುಪಲಿದೆ. ಮಂಗಳೂರು-ಬೆಂಗಳೂರು ಮಲ್ಟಿ ಅಕ್ಸೆಲ್ 2.0 ಮಂಗಳೂರುನಿಂದ ಬೆಳಗ್ಗೆ ಹೊರಟು ಸಂಜೆ 5:30ಕ್ಕೆ ಬೆಂಗಳೂರು ತಲುಪಲಿದೆ ಎಂದು ಹೇಳಿದರು.
ಪುತ್ತೂರು-ಸುಳ್ಯ-ಮಡಿಕೇರಿ ಮಾರ್ಗ ಎಸಿ ಸ್ಲೀಪರ್ ಪ್ರಥಮ ಬಾರಿಗೆ ಆರಂಭಿಸಲಾಗುತ್ತಿದೆ. ನೂತನ ಮಲ್ಟಿ ಅಕ್ಸೆಲ್ ಸೀಟರ್ 2.0 ಬಸ್ ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ ಎಂದು ರಾಜೇಶ್ ಶೆಟ್ಟಿ ಹೇಳಿದರು.
ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಮಂಗಳೂರು ತಾಲೂಕು ಅಧ್ಯಕ್ಷ ಸುರೇಂದ್ರ ಕಾಂಬಳಿ, ಮನಪಾ ಮಾಜಿ ಸದಸ್ಯೆ ಎಸ್.ಅಪ್ಪಿ, ಕೆಎಸ್ಸಾರ್ಟಿಸಿ ವಿಭಾಗ ಸಂಚಾರ ಅಧಿಕಾರಿ ಕಮಲ್ ಕುಮಾರ್, ಸಹಾಯಕ ಸಂಚಾರ ಮ್ಯಾನೇಜರ್ ನಿರ್ಮಲಾ, ಡಿಪೋ ಮ್ಯಾನೇಜರ್ಗಳಾದ ಪ್ರೀತ ಕುಮಾರಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









