ಬೆಂಗಳೂರು : ಪರಿಶಿಷ್ಟ ವರ್ಗದಲ್ಲಿ ಒಳಮೀಸಲಾತಿ ಜಾರಿ ಕುರಿತಂತೆ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಸದಾಶಿವನಗರದ ಕಚೇರಿಯಲ್ಲಿ ಸಚಿವರು, ಶಾಸಕರಗಳೊಂದಿಗೆ ಸಭೆ ನಡೆಯಿತು.
ಹಿರಿಯ ಸಚಿವರಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ ತಂಗಡಗಿ, ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಸೇರಿದಂತೆ ಪರಿಶಿಷ್ಟ ವರ್ಗದ ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಲವು ವರ್ಷಗಳಿಂದ ಒಳ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ಆಯೋಗ ನೇಮಿಸಲಾಗಿದೆ. ಅಂಕಿ-ಅಂಶಗಳನ್ನು ಸಂಗ್ರಹಣೆ ಮಾಡಿ. ಅದರ ಆಧಾರದ ಮೇಲೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿದಿರುವ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿ ತರಬೇಕು ಎಂಬ ಉದ್ದೇಶದಿಂದ ರಚಿಸಲಾದ ನಾಗಮೋಹನ್ ದಾಸ್ ಅವರ ಆಯೋಗ ಸದ್ಯದಲ್ಲೇ ವರದಿ ಕೊಡುತ್ತಾರೆ ಎಂಬ ಮಾಹಿತಿ ಇದೆ.
ವರದಿ ಕೊಡುವ ಸಂದರ್ಭದಲ್ಲಿ ಪರಿಶಿಷ್ಟ ವರ್ಗದಲ್ಲಿರುವ ವಿವಿಧ ಸಮುದಾಯಗಳು ಒಟ್ಟಾಗಿ ಹೋಗಬೇಕು. ಯಾವುದೆ ಸಂಘರ್ಷ ಆಗಬಾರದು. ಏನೇ ವ್ಯತ್ಯಾಸಗಳು ಬಂದರು ಅದನ್ನ ಸರಿದೂಗಿಸಿಕೊಂಡು ಹೋಗುವ ತೀರ್ಮಾನಕ್ಕೆ ಬರಬೇಕು. ಇಲ್ಲವಾದರೆ, ಒಳಮೀಸಲಾತಿ ಜಾರಿ ಮತ್ತೇ ಮುಂದೆ ಹೋಗುತ್ತದೆ ಎಂದರು.
ಆ ರೀತಿ ಆಗಬಾರದು ಉದ್ದೇಶಕ್ಕಾಗಿ ಇಂದು ನಾವೆಲ್ಲ ಸಭೆ ನಡೆಸಿ, ಒಟ್ಟಾಗಿ ಚರ್ಚೆ ಮಾಡಿದ್ದೇವೆ. ಏನೆ ವರದಿಯಲ್ಲಿ ಬರಲಿ, ಅದನ್ನು ನಾವೆಲ್ಲ ಒಟ್ಟಾಗಿ ಚರ್ಚೆ ಮಾಡಿಕೊಂಡು ಹೋಗಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು
ವರದಿ ಬಂದ ನಂತರ ಸ್ವಾಭಾವಿಕವಾಗಿ ಸಂಪುಟದ ತೀರ್ಮಾನಕ್ಕೆ ಹೋಗುತ್ತದೆ. ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಅದು ಬೇರೆ ವಿಚಾರ ಎಂದರು.
ಪರಿಶಿಷ್ಟ ವರ್ಗದಲ್ಲಿ 101 ಜಾತಿಗಳಿವೆ. ಅವೆಲ್ಲರಿಗು ನ್ಯಾಯ ಸಿಗಬೇಕು. ಸಣ್ಣ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಈ ಬಗ್ಗೆ ಸಚಿವರುಗಳು, ಶಾಸಕರುಗಳು, ಭಾಗವಹಿಸಿ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಒಳಮೀಸಲಾತಿಯ ವರದಿ ಬಂದ ನಂತರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಎಲ್ಲರಿಗು ನ್ಯಾಯ ಸಿಗವಂತ ರೀತಿಯಲ್ಲಿ ತೀರ್ಮಾನಕ್ಕೆ ಬರಬೇಕು ಎಂದು ಸಲಹೆ ಕೊಡುತ್ತೇವೆ ಎಂದು ಹೇಳಿದರು.
ಒಳ ಮೀಸಲಾತಿ ಕುರಿತು ಎಲ್ಲರೂ ಸಹಮತವನ್ನು ವ್ಯಕ್ತ ಮಾಡಿದ್ದಾರೆ. ಸಚಿವರು, ಶಾಸಕರುಗಳಿಲ್ಲದ ಸಮುದಾಯಗಳಿಗು ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಚರ್ಚೆ ಮಾಡಿದ್ದೇವೆ. ಸಣ್ಣ ಸಮುದಾಯಗಳಲ್ಲಿ ಯಾರು ಶಾಸಕರುಗಳಿಲ್ಲ. ಸಚಿವರುಗಳಿಲ್ಲ. ಅವರಿಗು ನ್ಯಾಯ ಸಿಗಬೇಕಲ್ಲವೇ? ಅದನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿದ್ದೇವೆ. ಈ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳಬಾರದು. ಇಲ್ಲವಾದರೆ ಮತ್ತೆ ಮುಂದಕ್ಕೆ ಹೋಗುತ್ತದೆ. ಅದು ಹೋಗಬಾರದು. ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಎಂಬುದನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಸಚಿವರಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ ತಂಗಡಗಿ, ವಿಧಾನಸಭಾ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಶಾಸಕರಾದ ಕೆ.ಎಸ್.ಬಸವಂತಪ್ಪ, ಎ.ಸಿ.ಶ್ರೀನಿವಾಸ್, ದರ್ಶನ್ ದ್ರುವ ನಾರಾಯಣ್, ನಯನಾ ಮೋಟಮ್ಮ, ರೂಪಾಕಲಾ ಶಶಿಧರ್, ನೆಲಮಂಗಲ ಶಾಸಕ ಶ್ರೀನಿವಾಸ್, ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ಸುದಾಮ್ ದಾಸ್, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮುಂತಾದವರು ಸಭೆಯಲ್ಲಿ ಇದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









