
ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರಂಭೋತ್ಸವ ಮತ್ತು ಏಳನೇ ಮೇಳದ ಪಾದಾರ್ಪಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ, ಬಜಪೆಯಿಂದ ಕಟೀಲುವರೆಗೆ ಏರ್ಪಡಿಸಿದ್ದ ದೇವರ ಬೆಳ್ಳಿ ಮತ್ತು ಬಂಗಾರದ ಪರಿಕರಗಳ ಮೆರವಣಿಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಷಿ, ಮಕ್ಕಳಲ್ಲಿ ಭಯ-ಭಕ್ತಿಯ ಪರಂಪರೆಯನ್ನು ನಮ್ಮ ತಾಯಂದಿರು ಬೆಳೆಸಿದ್ದಾರೆ. ಈ ಮೌಲ್ಯಗಳೇ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಉಳಿವಿಗೆ ಮುಖ್ಯ ಕಾರಣವಾಗಿವೆ ಎಂದು ಹೇಳಿದರು. ಯಕ್ಷಗಾನಕ್ಕೆ ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಅನೇಕ ಹಿರಿಯರು ಈ ಕಲೆಗೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಸ್ಮರಿಸಿದರು.
“ಸನಾತನ ಸಂಸ್ಕೃತಿಯ ಬಗ್ಗೆ ತಪ್ಪು ಕಲ್ಪನೆಗಳನ್ನು ಬಿಡಬೇಕು. ಈ ತಪ್ಪು ಕಲ್ಪನೆಯ ಕಾರಣದಿಂದಲೇ ನಮ್ಮ ಧರ್ಮದ ಮೇಲೆ ದಾಳಿಗಳು ನಡೆಯುತ್ತವೆ. ಆದರೆ, ಯಾರೇ ದಾಳಿ ಮಾಡಿದರೂ ನಮ್ಮ ಧರ್ಮಕ್ಕೆ ಅಪಾಯವಿಲ್ಲ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ತಮಗೂ ಮತ್ತು ತಮ್ಮ ಕುಟುಂಬಕ್ಕೂ ಕಟೀಲಮ್ಮನ ಮೇಲೆ ಹಾಗೂ ದೇವಳದ ಮೇಲೆ ವಿಶೇಷವಾದ ನಂಬಿಕೆ ಮತ್ತು ಭಯ-ಭಕ್ತಿ ಇದೆ ಎಂದು ಜೋಷಿ ಅವರು ತಿಳಿಸಿದರು.
ಬಜಪೆಯಿಂದ ಕಟೀಲುವರೆಗೆ ನಡೆದ ಭವ್ಯ ಮೆರವಣಿಗೆಯು ಕಲಾ ಮತ್ತು ಧಾರ್ಮಿಕ ವೈಭವದಿಂದ ಕೂಡಿತ್ತು. ಮೆರವಣಿಗೆಯಲ್ಲಿ ಏಳೂ ಮೇಳದ ದೇವರುಗಳು, ಚಿನ್ನ-ಬೆಳ್ಳಿಯ ಪರಿಕರಗಳು, ಏಳು ವಿಶೇಷ ಅಲಂಕಾರಿತ ವಾಹನಗಳು, ಶ್ರೀ ದುರ್ಗೆಯ ಅಲಂಕಾರಿಕ ಭಾವಚಿತ್ರ, ಕೊಂಬು ಡೋಲು ಮತ್ತು ವಿವಿಧ ವೇಷಗಳ ಪ್ರದರ್ಶನ ಗಮನ ಸೆಳೆಯಿತು.
ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಕೃಷ್ಣ ಜೆ ಪಾಲೇಮಾರ್ ಮತ್ತು ಅಭಯಚಂದ್ರ ಜೈನ್, ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಹಲವು ಧಾರ್ಮಿಕ, ರಾಜಕೀಯ ಮತ್ತು ದೇವಳದ ಆಡಳಿತ ಮಂಡಳಿಯ ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಯಕ್ಷಗಾನ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









