ಮಂಗಳೂರು : ಇದೀಗ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬಹಳಷ್ಟು ಹಣದ ವ್ಯವಸ್ಥೆ ಮಾಡಬೇಕಾಗಿದೆ. ಇದರಲ್ಲಿ ಕಲ್ಯಾಣ ಮಂಟಪಕ್ಕೆ ದುಬಾರಿ ವೆಚ್ಚ ಇದೆ. ಆದರೆ ಮಂಗಳೂರಿನಲ್ಲಿ ಸುಸಜ್ಜಿತ ಸಭಾಂಗಣವೊಂದನ್ನು ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲಾಗುತ್ತಿದೆ.
ಇದು ಮಂಗಳೂರಿನ ತಲಪಾಡಿಯ ದೇವಿಪುರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಲ್ಲಿರುವ ಶ್ರೀ ದುರ್ಗಾ ಧ್ಯಾನ ಮಂದಿರ.ಈ ದುರ್ಗಾ ಧ್ಯಾನ ಮಂದಿರದಲ್ಲಿ ಮದುವೆ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವುದಿದ್ದರೆ ಸಭಾಂಗಣ ಉಚಿತವಾಗಿ ನೀಡಲಾಗುತ್ತಿದೆ.
ಈ ಸಭಾಂಗಣ ಇರುವುದು ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ದೇವಿಪುರದಲ್ಲಿ. ಈ ಧ್ಯಾನಮಂದಿರದಲ್ಲಿ ಸ್ಥಳೀಯರು ಮಾತ್ರವಲ್ಲದೆ, ದೂರದ ಊರಿನವರು ಬಂದು ಕಾರ್ಯಕ್ರಮ ಮಾಡುತ್ತಾರೆ. ಇಲ್ಲಿ ಕಾರ್ಯಕ್ರಮಕ್ಕೆ ಸಭಾಂಗಣ ಸಂಪೂರ್ಣ ಉಚಿತವಾಗಿದೆ. ಯಾವುದೇ ಜಾತಿ ಧರ್ಮ, ಶ್ರೀಮಂತ ಬಡವರೆನ್ನವುದನ್ನು ನೋಡದೆ ಉಚಿತವಾಗಿ ನೋಡಲಾಗುತ್ತಿದೆ. ಆದರೆ ಈ ಸಭಾಂಗಣದಲ್ಲಿ ಕೇವಲ ಸಸ್ಯಾಹಾರ ಮಾತ್ರ ಮಾಡಬೇಕಾಗುತ್ತದೆ.
ಈ ಸಭಾಂಗಣದಲ್ಲಿ ಶ್ರೀ ಬಂಗಾರೆಣ್ಣೆರ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು,ವೇದಿಕೆಯಲ್ಲಿ ವಧು ವರರಿಗೆ ವಿಶೇಷ ಆಸನ, 600 ಆಸನ, ವಧು ವರರ ಡ್ರೆಸಿಂಗ್ ರೂಂ, ಪ್ರತ್ಯೇಕ ಎರಡು ರೂಂ, ಫ್ಯಾನ್, ಊಟದ ಹಾಲ್,ಅಡುಗೆ ಹಾಲ್, ಅಡುಗೆ ಪಾತ್ರೆಗಳ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲವೂ ಸಂಪೂರ್ಣ ಉಚಿತವಾಗಿ ಬಳಸಬಹುದಾಗಿದೆ.
ಮದುವೆ ಕಾರ್ಯಕ್ರಮಕ್ಕೆ ಜನರೇಟರ್ ಬಳಸುವುದಿದ್ದರೆ ಮತ್ತು ಸ್ವಚ್ಚತಾ ಕಾರ್ಯಕ್ಕೆ ಮಾತ್ರ 4 ಸಾವಿರ ರೂ ಪಾವತಿಸಬೇಕಾಗುತ್ತದೆ.
ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಅವರು ತಮ್ಮ ವೈಯಕ್ತಿಕ ನೆಲೆಯಿಂದ ಈ ಸಭಾಂಗಣ ನಿರ್ಮಿಸಿದ್ದಾರೆ. ದೇವಸ್ಥಾನದ ಟ್ರಸ್ಟಿ ರಾಮಮನೋಹರ್ ರೈ ಅವರು ಗಣೇಶ್ ಭಟ್ ಅವರಲ್ಲಿ ಉಚಿತ ಕಲ್ಯಾಣ ಮಂಟಪ ಮಾಡುವಂತೆ ಮಾಡಿದ ನಿವೇದನೆ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣೇಶ್ ಭಟ್ ಅವರು ಈ ಸಭಾಂಗಣ ನಿರ್ಮಿಸಿದ್ದಾರೆ. ಈ ಸಭಾಂಗಣಕ್ಕೆ ಮಾಡಿರುವ ಸಾಲ ಪೂರ್ಣಗೊಂಡ ನಂತರ ಇದನ್ನು ದೇವಸ್ಥಾನಕ್ಕೆ ಸಮರ್ಪಿಸಲಿದ್ದಾರೆ.
2023 ರಲ್ಲಿ ಆರಂಭವಾದ ಈ ಕಲ್ಯಾಣ ಮಂಟಪದಲ್ಲಿ ಈಗಾಗಲೇ ಹಲವು ಮದುವೆ, ಉಪನಯನ, ಉತ್ತರ ಕ್ರಿಯೆ, ವೈಕುಂಠ ಸಮಾರಾಧನೆ ಮೊದಲಾದ ಕಾರ್ಯಕ್ರಮಗಳು ನಡೆದಿದೆ. ಇದೆಲ್ಲವು ಉಚಿತವಾಗಿ ನೀಡಲಾಗಿದೆ. ಇದು ಮುಂದೆಯು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಗಣೇಶ್ ಭಟ್ ಅವರು ರಾಮ ಮನೋಹರ್ ಶೆಟ್ಟಿ ಅವರು ತಿಳಿಸಿದಂತೆ ಇಲ್ಲಿ ಈ ಉಚಿತ ಸಭಾಂಗಣ ನಿರ್ಮಿಸಲಾಗಿದೆ. ಈ ಸಭಾಂಗಣವನ್ನು ಮುಂದೆ ದೇವಸ್ಥಾನಕ್ಕೆ ಸಮರ್ಪಿಸಲಾಗುವುದು. ಸಸ್ಯಹಾರ ಭೋಜನ ಮಾಡುವ ಯಾರಿಗೂ ಯಾವ ಭೇದ ಭಾವ ಇಲ್ಲದೆ ಮದುವೆ ಮೊದಲಾದ ಸಮಾರಂಭಕ್ಕೆ ಉಚಿತವಾಗಿ ನೀಡಲಾಗುವುದು ಎಂದರು.
ಈ ಉಚಿತ ಕಲ್ಯಾಣ ಮಂಟಪದ ಬಗ್ಗೆ ಮಾತನಾಡಿದ ಪ್ರಕಾಶ್ ಅವರು ಗಣೇಶ್ ಭಟ್ ಅವರು ಜನರಿಗೆ ಉಪಕಾರಿ.ಅವರು ಈ ಉಚಿತ ಸಭಾಂಗಣದ ವ್ಯವಸ್ಥೆ ಮಾಡಿರುವುದು ಜನರಿಗೆ ಬಹಳಷ್ಟು ಅನುಕೂಲ ತಂದಿದೆ ಎಂದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









