ಮಂಗಳೂರು: “ಬದುಕಿನಲ್ಲಿ ನಾವು ಪಡೆಯುವ ಯಶಸ್ಸು ಸಮಾಜದ ನೊಂದವರಿಗೆ ಆಸರೆಯಾದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ. ಇಂದು ಈ ಯೋಜನೆಯ ಲಾಭ ಪಡೆಯುತ್ತಿರುವ ಮಕ್ಕಳು ನಾಳೆ ಉತ್ತಮ ಸ್ಥಾನಕ್ಕೇರಿ, ಸಮಾಜದ ಶೋಷಿತರ ಪರವಾಗಿ ಧ್ವನಿಯಾಗಬೇಕು” ಎಂದು ಎಂ.ಆರ್.ಜಿ. ಗ್ರೂಪ್ನ ಚೇರ್ಮನ್ ಹಾಗೂ ಖ್ಯಾತ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ ಅವರು ಕರೆ ನೀಡಿದರು. ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ಎಂ.ಆರ್.ಜಿ. ಗ್ರೂಪ್ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ‘ನೆರವು-2025’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ತಮ್ಮ ಹಳ್ಳಿಯ ಜೀವನ ಮತ್ತು ಬೆಳೆದು ಬಂದ ಹಾದಿಯನ್ನು ಸ್ಮರಿಸಿದ ಡಾ. ಶೆಟ್ಟಿ, ಹಸಿವು ಮತ್ತು ಕಷ್ಟಗಳ ನಡುವೆ ತಮಗೆ ಆಸರೆಯಾದ ತುಳುನಾಡಿನ ಮಣ್ಣಿನ ಗುಣ ಹಾಗೂ ತಂದೆ-ತಾಯಿಯ ಸಂಸ್ಕಾರವೇ ಇಂದಿನ ಸಾಧನೆಗೆ ಕಾರಣ ಎಂದರು. 1983ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದಾಗ ಎದುರಿಸಿದ ಹದಿನೈದು ವರ್ಷಗಳ ಸವಾಲುಗಳು, ಅವಮಾನಗಳು ತಮ್ಮನ್ನು ಗಟ್ಟಿಗೊಳಿಸಿದವು. ದೈವದ ಆಶೀರ್ವಾದದಿಂದ ಉದ್ಯಮದಲ್ಲಿ ಯಶಸ್ಸು ಕಂಡ ಮೇಲೆ, ತನ್ನ ಹುಟ್ಟೂರಿನ ಜನರಿಗೆ ಏನಾದರೂ ಮರಳಿಸಬೇಕು ಎಂಬ ಸಂಕಲ್ಪದೊಂದಿಗೆ 2019ರಲ್ಲಿ ಈ ‘ನೆರವು’ ಯೋಜನೆಗೆ ಚಾಲನೆ ನೀಡಿದ್ದಾಗಿ ಅವರು ಭಾವುಕರಾಗಿ ತಿಳಿಸಿದರು.
ಈ ಬಾರಿಯ ‘ನೆರವು’ ಯೋಜನೆಯು ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಒಟ್ಟು 4,000 ಕುಟುಂಬಗಳಿಗೆ ಮತ್ತು 100ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ಬರೋಬ್ಬರಿ 9.5 ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ವಿತರಿಸಲಾಯಿತು. ಆಧುನಿಕ ಕಾಲದಲ್ಲಿ ವೈದ್ಯಕೀಯ ಸವಲತ್ತುಗಳು ದುಬಾರಿಯಾಗಿರುವ ಹಿನ್ನೆಲೆಯಲ್ಲಿ, ಬಡವರಿಗೆ ಚಿಕಿತ್ಸೆ ಸುಲಭವಾಗಿ ಸಿಗಲಿ ಎಂಬ ಉದ್ದೇಶದಿಂದ ಸಹಾಯಧನದ ದೊಡ್ಡ ಪಾಲನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಯೋಜನೆಯ ಹತ್ತನೇ ವರ್ಷದ ನಂತರ ಇದನ್ನು ಮತ್ತಷ್ಟು ವಿಸ್ತರಿಸಿ, ವಾರ್ಷಿಕವಾಗಿ ಕನಿಷ್ಠ 14,000 ಕುಟುಂಬಗಳಿಗೆ ತಲುಪುವ ಬೃಹತ್ ಗುರಿಯನ್ನು ಅವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಾತನಾಡಿ, ಬದುಕಿನ ನಂತರ ನಮ್ಮ ಹೆಸರು ಉಳಿಯುವುದು ಇಂತಹ ಸತ್ಕಾರ್ಯಗಳಿಂದ ಮಾತ್ರ. ಪ್ರಕಾಶ್ ಶೆಟ್ಟಿಯವರ ಈ ಕಾರ್ಯಕ್ರಮವು ಜಾತಿ-ಮತಗಳ ಬೇಧವಿಲ್ಲದೆ ಸರ್ವ ಜನಾಂಗದವರನ್ನು ಒಗ್ಗೂಡಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಶ್ಲಾಘಿಸಿದರು. ಕೇವಲ ಹಣ ನೀಡುವುದಷ್ಟೇ ಅಲ್ಲದೆ, ನೊಂದವರ ಮನೋಬಲ ಹೆಚ್ಚಿಸುವ ಇಂತಹ ಕಾರ್ಯಕ್ಕೆ ಸಮಾಜದ ಬೆಂಬಲ ಸದಾ ಇರಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ಡಾ. ಮೋಹನ್ ಆಳ್ವ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಸೇರಿದಂತೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಸುಮಾರು ಏಳು ಜಿಲ್ಲೆಗಳ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರೆ, ದಾಮೋದರ ಶರ್ಮಾ ಹಾಗೂ ನಿತೇಶ್ ಎಕ್ಕಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









