ಪುತ್ತೂರು: ಪುತ್ತೂರಿನ ಕಾವು ಮಣಿಯಡ್ಕ ನಿವಾಸಿ ರವಿ (35) ಎಂಬುವವರು ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ವಿಷ ಸೇವಿಸಿದ ತಕ್ಷಣ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಕೌಟುಂಬಿಕ ಕಲಹ ಮತ್ತು ಪೊಲೀಸ್ ಪ್ರಕರಣ
ರವಿ ಮತ್ತು ಅವರ ಪತ್ನಿ ವಿದ್ಯಾಶ್ರೀ ನಡುವೆ ಕಳೆದ ಕೆಲವು ಸಮಯದಿಂದ ತೀವ್ರ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ರವಿ ತನ್ನ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದರು ಎನ್ನಲಾಗಿದ್ದು, ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಇಂದು ಸಂಧಾನ ಅಥವಾ ವಿಚ್ಛೇದನದ ಮಾತುಕತೆಗಾಗಿ ಠಾಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ರವಿ ನೇರವಾಗಿ ನ್ಯಾಯಾಲಯಕ್ಕೆ ಬಂದು ಈ ನಿರ್ಧಾರ ಕೈಗೊಂಡಿದ್ದಾರೆ.
ಆಸ್ಪತ್ರೆಗೆ ಸಾಗಿಸುವ ವೇಳೆ ಒಂದಾದ ದಂಪತಿ
ರವಿ ಸೇವಿಸಿರುವುದು ಗೇರು ತೋಟಕ್ಕೆ ಬಳಸುವ ‘ಕರಾಟೆ’ ಎಂಬ ತೀವ್ರ ತರದ ಕೀಟನಾಶಕವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆತ್ಮಹತ್ಯೆ ಯತ್ನದ ಘಟನೆಯ ನಂತರ ದಂಪತಿಗಳು ಒಂದಾಗಿದ್ದಾರೆ. ರವಿಯವರ ಸ್ಥಿತಿ ಕಂಡು ಮರುಗಿದ ಪತ್ನಿ ವಿದ್ಯಾಶ್ರೀ, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಪತಿಯೊಂದಿಗೆ ಒಂದೇ ಆಂಬ್ಯುಲೆನ್ಸ್ನಲ್ಲಿ ತೆರಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









