ಕಡಬ : ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದ ಘಟನೆ ಈಗ ಭೀಕರ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ 17 ವರ್ಷದ ಬಾಲಕನೊಬ್ಬ ತನ್ನ ತಂದೆಗೆ ಚೂರಿಯಿಂದ ಇರಿದು ಬಳಿಕ ತಾನು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಹರಡಿತ್ತು. ಆದರೆ, ಮೃತ ಬಾಲಕ ಮೋಕ್ಷಿತ್ನ ತಾಯಿ ಜಯಶ್ರೀ ಅವರು ನೀಡಿರುವ ದೂರು ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದ್ದು, ತನ್ನ ಪತಿಯೇ ಮಗನನ್ನು ಹತ್ಯೆಗೈದು ನಾಟಕವಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಮಕುಂಜದಲ್ಲಿ ಕೃಷಿ ಭೂಮಿ ಖರೀದಿಸಿ ಹಳೆಯ ಮನೆಯಲ್ಲಿ ವಾಸವಾಗಿದ್ದ ವಸಂತ ಅಮೀನ್ (50), ಶನಿವಾರ ಸಂಜೆ ತನ್ನ ಪರಿಚಯಸ್ಥರಿಗೆ ಕರೆ ಮಾಡಿ ಮಗ ತನ್ನ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ನಂಬಿಸಿದ್ದರು.
ಆದರೆ ಈ ಘಟನೆಯ ಹಿಂದೆ ಆಸ್ತಿ ದ್ವೇಷದ ಕರಾಳ ಮುಖವಿದೆ ಎನ್ನಲಾಗಿದೆ. ರಾಮಕುಂಜದಲ್ಲಿರುವ ಆಸ್ತಿಯು ಪತ್ನಿ ಜಯಶ್ರೀ ಅವರ ಹೆಸರಿನಲ್ಲಿದ್ದು, ಅದನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ವಸಂತ ಅಮೀನ್ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಮಗ ಮೋಕ್ಷಿತ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದ್ದು, ಇದೇ ದ್ವೇಷಕ್ಕೆ ತಂದೆಯು ಮಗನನ್ನು ಸಂಚು ರೂಪಿಸಿ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ತಾಯಿಯ ಜೊತೆ ವಾಸವಿದ್ದ ಮೋಕ್ಷಿತ್ನನ್ನು ಒಂದು ತಿಂಗಳ ಹಿಂದಷ್ಟೇ ತಂದೆ ರಾಮಕುಂಜಕ್ಕೆ ಕರೆತಂದಿದ್ದರು. ಘಟನೆ ನಡೆದ ದಿನದಂದು ಚಿಕಿತ್ಸೆಯ ನೆಪವೊಡ್ಡಿ ಮಗನನ್ನು ಮಂಗಳೂರಿಗೆ ಕರೆದೊಯ್ದಿದ್ದ ವಸಂತ ಅಮೀನ್ ವರ್ತನೆ ಬಗ್ಗೆ ಮೋಕ್ಷಿತ್ಗೆ ಅನುಮಾನವಿತ್ತು. ಹಾಗಾಗಿಯೇ ಆತ ಸಾವಿಗೂ ಮುನ್ನ ತಾಯಿಗೆ ಕರೆ ಮಾಡಿ, “ನನಗೆ ಏನಾದರೂ ಅಪಾಯವಾದರೆ ಅದಕ್ಕೆ ತಂದೆಯೇ ಕಾರಣ” ಎಂದು ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಗ್ರಾಮಾಂತರ ವೃತ್ತ ನಿರೀಕ್ಷಕ ನಾಗರಾಜ್ ಮತ್ತು ಕಡಬ ಎಸೈ ಜಂಬೂರಾಜ್ ಮಹಾಜನ್ ಅವರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಂಭೀರ ಗಾಯಗೊಂಡಿರುವ ವಸಂತ ಅಮೀನ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯೇ ಮಗನನ್ನು ಕೊಂದು, ತಾನು ಅಮಾಯಕನೆಂದು ಬಿಂಬಿಸಲು ಚೂರಿಯಿಂದ ತನಗೇ ಇಟ್ಟುಕೊಂಡು ಗಾಯ ಮಾಡಿಕೊಂಡಿರಬಹುದೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಗನ ಸಾವಿನ ಸುತ್ತ ಎದ್ದಿರುವ ಈ ಊಹಾಪೋಹಗಳಿಗೆ ಪೊಲೀಸ್ ತನಿಖೆಯ ಅಂತ್ಯದಲ್ಲಿ ಮಾತ್ರ ಸ್ಪಷ್ಟ ಉತ್ತರ ಸಿಗಬೇಕಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









