ಮಂಗಳೂರು: ಮಂಗಳೂರಿನ ಪುರಭವನದ ಸನಿಹದಲ್ಲಿರುವ ಪೊಲೀಸ್ ಲೇನ್ನ ವಸತಿಗೃಹದಲ್ಲಿ ಕಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮರ್ಥ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಮರ್ಥ್ ಅವರು ರಜೆ ನಿಮಿತ್ತ ಊರಿಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ಅವರ ಎ1 ಬ್ಲಾಕ್ನಲ್ಲಿರುವ ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಅಪಹರಿಸಿದ್ದಾರೆ.
ನೆರೆಹೊರೆಯವರು ಗಮನಿಸದ ಸಮಯದಲ್ಲಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಗೋಡ್ರೇಜ್ ಬೀರುವನ್ನು ಜಾಲಾಡಿ ಅಸ್ತವ್ಯಸ್ತಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕ್ರೈಂ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ದೂರುದಾರರನ್ನು ಸಂಪರ್ಕಿಸಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಹಾನಿ ಸಂಭವಿಸದಿದ್ದರೂ ಬೆಲೆಬಾಳುವ ವಸ್ತುಗಳ ಕಳುವಾಗಿರುವುದು ದೃಢಪಟ್ಟಿದೆ.
ಪೊಲೀಸ್ ಲೇನ್ನ ಮೂರು ಗೇಟ್ಗಳು ಯಾವಾಗಲೂ ತೆರೆದಿರುವುದು ಹಾಗೂ ಅಲ್ಲಿ ಸರಿಯಾದ ಭದ್ರತೆ ಇಲ್ಲದಿರುವುದು ಈ ಕೃತ್ಯಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಕೇರಳ ಮೂಲದ ಅಪರಿಚಿತ ವ್ಯಕ್ತಿಗಳು ಈ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ವಸತಿಗೃಹದ ಭದ್ರತೆಯನ್ನು ಬಿಗಿಗೊಳಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಹುದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









