ಮಂಗಳೂರು : ಒಂದು ಕಾಲದಲ್ಲಿ ರೋಗರುಜಿನಗಳನ್ನು ಗುಣಪಡಿಸುವ ಪವಿತ್ರ ತೀರ್ಥವೆಂದು ಹೆಸರಾಗಿದ್ದ ಮಂಗಳೂರಿನ ಐತಿಹಾಸಿಕ ಗುಜ್ಜರಕೆರೆ ಇಂದು ಅಪಾಯಕಾರಿ ಬ್ಯಾಕ್ಟೀರಿಯಾಗಳ ತಾಣವಾಗಿ ಮಾರ್ಪಟ್ಟಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆರೆಯ ಸುತ್ತಮುತ್ತ ಅಭಿವೃದ್ಧಿ ಪಡಿಸಲಾಗಿದ್ದರೂ, ಕೆರೆಯ ಒಳಭಾಗದ ನೀರು ಮಾತ್ರ ವಿಷಪೂರಿತವಾಗಿದೆ. ಕೆರೆಗೆ ನಿರಂತರವಾಗಿ ಸೇರುತ್ತಿರುವ ಒಳಚರಂಡಿ ನೀರು ಈ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಈ ಬಗ್ಗೆ ಸ್ಥಳೀಯರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಶಾಶ್ವತ ಪರಿಹಾರ ಲಭಿಸಿಲ್ಲ.
ಇತ್ತೀಚೆಗೆ ನಡೆಸಲಾದ ನೀರಿನ ಗುಣಮಟ್ಟದ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಹೊರಬಂದಿವೆ. ಪ್ರತಿ 100 ಮಿಲಿ ಲೀಟರ್ ನೀರಿನಲ್ಲಿ ಟೋಟಲ್ ಕಾಲಿಫಾರ್ಮ್ ಮತ್ತು ಫೀಕಲ್ ಕಾಲಿಫಾರ್ಮ್ ಪ್ರಮಾಣ ತಲಾ 1,600ರಷ್ಟು ಪತ್ತೆಯಾಗಿದೆ. ಸಾಮಾನ್ಯವಾಗಿ ಕುಡಿಯುವ ನೀರಿನಲ್ಲಿ ಇವುಗಳ ಪ್ರಮಾಣ ಶೂನ್ಯ ಇರಬೇಕು. 10ಕ್ಕಿಂತ ಹೆಚ್ಚಿದ್ದರೆ ಅದು ಬಳಕೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿನ ಪರಿಸ್ಥಿತಿ ಮಿತಿ ಮೀರಿ ಹೋಗಿದ್ದು, ಏಳು ತಿಂಗಳ ಹಿಂದೆ ನಡೆಸಿದ ಪರೀಕ್ಷೆಗೆ ಹೋಲಿಸಿದರೆ ಬ್ಯಾಕ್ಟೀರಿಯಾಗಳ ಪ್ರಮಾಣ ಎರಡು ಪಟ್ಟಿಗಿಂತಲೂ ಹೆಚ್ಚು ಏರಿಕೆಯಾಗಿರುವುದು ವರದಿಯಲ್ಲಿ ದೃಢಪಟ್ಟಿದೆ.
ನಾಥ ಪಂಥದ ಗುರು ಗೋರಖನಾಥರ ತಪೋಶಕ್ತಿಯಿಂದ ನಿರ್ಮಿತವಾದ ಈ ಕೆರೆಯು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ. ಮಂಗಳಾದೇವಿ ಕ್ಷೇತ್ರದ ಇತಿಹಾಸದಲ್ಲಿಯೂ ಈ ಕೆರೆಯ ಉಲ್ಲೇಖವಿದ್ದು, ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ದೇವಿಯ ತೀರ್ಥ ಸ್ನಾನವೂ ಇಲ್ಲಿ ನಡೆಯುತ್ತಿತ್ತು. ಇಂತಹ ಪವಿತ್ರ ಐತಿಹ್ಯವುಳ್ಳ ಕೆರೆಯು ಇಂದು ಶೌಚಾಲಯದ ತ್ಯಾಜ್ಯದಿಂದ ಕಲುಷಿತಗೊಂಡಿರುವುದು ಭಕ್ತರ ಮತ್ತು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತು ಒಳಚರಂಡಿ ಸೋರಿಕೆಯನ್ನು ತಡೆಗಟ್ಟದಿದ್ದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









