ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ಮಾದಕವಸ್ತು ಮಾರಾಟ ಜಾಲವನ್ನು ಭೇದಿಸಿದ್ದು, ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಫೆಬ್ರವರಿ 18ರಂದು ಪುತ್ತೂರು ಕಡೆಯಿಂದ ಸುಳ್ಯಕ್ಕೆ ಕಾರಿನಲ್ಲಿ ಎಂಡಿಎಂಎ (MDMA) ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೋಝಿಕೋಡ್ನ ಮುಹಮ್ಮದ್ ಅಜ್ಮಲ್ ಸಿ ಅಲಿಯಾಸ್ ಅಜ್ಜು (30), ವಯನಾಡ್ನ ಇಸ್ಮಾಯಿಲ್ (28) ಮತ್ತು ಕೋಝಿಕೋಡ್ನ ಸಂಶೀರ್ (27) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಸುಮಾರು 5,38,800 ರೂಪಾಯಿ ಮೌಲ್ಯದ 53.58 ಗ್ರಾಂ ಎಂಡಿಎಂಎ ಮಾದಕವಸ್ತು, ಮಾರಕಾಸ್ತ್ರವಾದ ತಲವಾರ್, ಕಾರು, ಮೊಬೈಲ್ ಫೋನ್ಗಳು ಹಾಗೂ 10,000 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳು ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯಗಳಾದ್ಯಂತ ಮಾದಕವಸ್ತುವನ್ನು ಸರಬರಾಜು ಮಾಡುವ ಬೃಹತ್ ಜಾಲವನ್ನು ಹೊಂದಿದ್ದು, ಕೇರಳದ ವಿವಿಧ ಜಿಲ್ಲೆಗಳಲ್ಲಿ ಇವರ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಪ್ರಮುಖ ಆರೋಪಿ ಮುಹಮ್ಮದ್ ಅಜ್ಮಲ್ ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಮಾದಕವಸ್ತು ಪ್ರಕರಣದಲ್ಲಿಯೂ ಬೇಕಾಗಿದ್ದವನಾಗಿದ್ದು, ಈತನ ಸಹಚರ ಇಸ್ಮಾಯಿಲ್ ಮೇಲೆ ಕೇರಳದಲ್ಲಿ ಸಾಗಾಟದ ಪ್ರಕರಣಗಳಿವೆ. ಮಾದಕವಸ್ತುವಿನ ಜೊತೆಗೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಈ ತಂಡವು ಪೊಲೀಸರಿಗೆ ತಲೆಮರೆಸಿಕೊಂಡು ತಿರುಗುತ್ತಿತ್ತು.
ಈ ಯಶಸ್ವಿ ಕಾರ್ಯಾಚರಣೆಯನ್ನು ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ, ಗ್ರಾಮಾಂತರ ಠಾಣಾ ನಿರೀಕ್ಷಕ ಸುನಿಲ್ ಕುಮಾರ್, ಡಿಎಸ್ ಬಿ ವಿಭಾಗದ ನಂದ ಕುಮಾರ್ ಹಾಗೂ ವಿಶೇಷ ತಂಡದ ಸಿಬ್ಬಂದಿಗಳು ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಎನ್ ಡಿಪಿಎಸ್ (NDPS) ಕಾಯ್ದೆ ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ತಂಡದ ಈ ಸಾಹಸಿಕ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









