ಮಂಗಳೂರು: ಮಹಾಕಾಳಿಪಡ್ಪು ರೈಲ್ವೇ ಅಂಡರ್ಪಾಸ್ ವಾಹನ ಸಂಚಾರಕ್ಕೆ ಮುಕ್ತಗೊಂಡ ಬೆನ್ನಲ್ಲೇ, ಈ ಹಿಂದೆ ಬಳಕೆಯಲ್ಲಿದ್ದ ರೈಲ್ವೇ ಕ್ರಾಸಿಂಗ್ ಅನ್ನು ರೈಲ್ವೇ ಇಲಾಖೆಯು ಶಾಶ್ವತವಾಗಿ ಬಂದ್ ಮಾಡಿದೆ. ಹಳೆಯ ಕ್ರಾಸಿಂಗ್ ಅನ್ನು ಸಂಪೂರ್ಣವಾಗಿ ಮುಚ್ಚದಂತೆ ಸ್ಥಳೀಯರು ಮನವಿ ಮಾಡಿದ್ದರೂ, ಅದಕ್ಕೆ ಮನ್ನಣೆ ನೀಡದ ಇಲಾಖೆಯು ರೈಲು ಹಳಿಯ ಎರಡೂ ಬದಿಗಳಲ್ಲಿ ಸುಮಾರು ನಾಲ್ಕರಿಂದ ಐದು ಅಡಿ ಎತ್ತರದ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಿದೆ. ಗೇಟ್ ಬಂದ್ ಮಾಡುವುದರ ಜೊತೆಗೆ ಶಾಶ್ವತ ಗೋಡೆ ಎಬ್ಬಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಅಂಡರ್ಪಾಸ್ನಲ್ಲಿ ಮಳೆಗಾಲದ ಅವಧಿಯಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ಸಂಚಕಾರ ತರುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಈಗಾಗಲೇ ಅಂಡರ್ಪಾಸ್ ಬಳಿ ನೀರು ನಿಲ್ಲುತ್ತಿದ್ದು, ಮುಂಬರುವ ಮಳೆಗಾಲದಲ್ಲಿ ಇದು ಸಂಪೂರ್ಣ ಜಲಾವೃತಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ಪರಿಸ್ಥಿತಿಯನ್ನು ಗಮನಿಸುವವರೆಗಾದರೂ ಹಳೆಯ ಕ್ರಾಸಿಂಗ್ ಉಳಿಸಿಕೊಳ್ಳುವಂತೆ ಅಥವಾ ಕನಿಷ್ಠ ಪಕ್ಷ ಗೇಟ್ಗೆ ಬೀಗ ಹಾಕಿ ಸಂರಕ್ಷಿಸುವಂತೆ ಸಂಸದರಿಗೆ ಹಾಗೂ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಈ ಯಾವುದೇ ಬೇಡಿಕೆಗಳಿಗೆ ಸೊಪ್ಪು ಹಾಕದೆ ಕಾಮಗಾರಿ ಮುಂದುವರಿಸಿದ್ದಾರೆ.
ಈ ಹಿಂದೆ ಅಂಡರ್ಪಾಸ್ ನಿರ್ಮಾಣದ ಸಂದರ್ಭದಲ್ಲೂ ನೀರಿನ ಒರತೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಪಕ್ಕದಲ್ಲೇ ಕೆರೆ ಇರುವುದರಿಂದ ಹೆಚ್ಚಿನ ಪ್ರಮಾಣದ ನೀರು ಅಂಡರ್ಪಾಸ್ನತ್ತ ಹರಿದು ಬರುತ್ತಿದ್ದು, ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆಯ ಕೊರತೆಯಿದೆ. ಪ್ರಸ್ತುತ ಹೊಸ ಹಾದಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದರೂ, ಮಳೆಗಾಲದಲ್ಲಿ ಅಂಡರ್ಪಾಸ್ ಕೆರೆಯಂತಾದರೆ ಪರ್ಯಾಯ ಮಾರ್ಗವಿಲ್ಲದೆ ಪರದಾಡಬೇಕಾಗಬಹುದು ಎಂಬ ಆತಂಕದಲ್ಲಿ ಸ್ಥಳೀಯ ನಿವಾಸಿಗಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









