ಮಂಗಳೂರು : ಜನನಿಬಿಡ ಪ್ರದೇಶವಾದ ಕದ್ರಿ ದೇವಸ್ಥಾನದ ಸಮೀಪದ ಡಾಕ್ಟರ್ಸ್ ಕಾಲನಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ನಾಗರಿಕರಲ್ಲಿ ಭೀತಿ ಮೂಡಿಸಿದೆ. ಫೆಬ್ರವರಿ 23ರ ಸೋಮವಾರ ಮಧ್ಯರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಚಿರತೆ ಓಡಾಡುತ್ತಿರುವ ದೃಶ್ಯವು ಕಾಲನಿಯ ಗೇಟ್ ಮುಂಭಾಗದ ಎರಡು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕದ್ರಿ ದೇವಸ್ಥಾನದ ಮೇಲ್ಭಾಗದಲ್ಲಿ ಅಲ್ಪಪ್ರಮಾಣದ ಕುರುಚಲು ಕಾಡನ್ನು ಹೊರತುಪಡಿಸಿದರೆ, ಉಳಿದೆಲ್ಲೆಡೆ ಬಹುಮಹಡಿ ಕಟ್ಟಡಗಳು ಮತ್ತು ವಿಲ್ಲಾಗಳೇ ಇವೆ. ಇಂತಹ ಕಾಂಕ್ರೀಟ್ ಕಾಡಿನ ನಡುವೆ ವನ್ಯಮೃಗ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಹಿಂದೆಯೂ ಇದೇ ಪರಿಸರದಲ್ಲಿ ಕಾಡುಕೋಣ ಕಾಣಿಸಿಕೊಂಡು ಸಂಚಲನ ಮೂಡಿಸಿತ್ತು. ಅಲ್ಲದೆ, ವಾರದ ಹಿಂದೆಯಷ್ಟೇ ಶಕ್ತಿನಗರ ಭಾಗದಲ್ಲಿ ಸಣ್ಣ ಚಿರತೆಯೊಂದು ಪತ್ತೆಯಾಗಿತ್ತು, ಆದರೆ ಈಗ ಕದ್ರಿಯಲ್ಲಿ ಕಂಡ ಬಂದಿರುವುದು ಗಾತ್ರದಲ್ಲಿ ದೊಡ್ಡದಾಗಿರುವ ಚಿರತೆಯಾಗಿದೆ. ಈ ಭಾಗದಲ್ಲಿ ಚಿರತೆಗೆ ಆಹಾರವಾಗಿ ಪ್ರಾಣಿಗಳು ಸಿಗುವುದು ವಿರಳವಾಗಿದ್ದರೂ, ಆಹಾರ ಅರಸುತ್ತಾ ನಗರದೊಳಗೆ ಬಂದಿರುವ ಸಾಧ್ಯತೆಯಿದೆ. ಸದ್ಯಕ್ಕೆ ಚಿರತೆಯು ಸಿಸಿಟಿವಿಯಲ್ಲಿ ಮಾತ್ರ ಕಂಡುಬಂದಿದ್ದು, ಯಾರಿಗೂ ನೇರವಾಗಿ ದರ್ಶನ ನೀಡದ ಕಾರಣ ಅರಣ್ಯ ಇಲಾಖೆಗೆ ಅಧಿಕೃತ ದೂರುಗಳು ಸಲ್ಲಿಕೆಯಾಗಿಲ್ಲ.
ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಆಹಾರ ಮತ್ತು ನೀರನ್ನು ಹುಡುಕುತ್ತಾ ಚಿರತೆಗಳು ನಾಡಿಗೆ ಬರುವುದು ಸಹಜ ಪ್ರಕ್ರಿಯೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಚಿರತೆಗಳು ಒಂದು ರಾತ್ರಿಯಲ್ಲಿ ಕನಿಷ್ಠ 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಆಹಾರ ಸಿಗದಿದ್ದಲ್ಲಿ ಒಂದೇ ಕಡೆ ನೆಲೆ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೂ ನಗರದ ಹೃದಯಭಾಗದಲ್ಲಿ ಚಿರತೆಯ ಸಂಚಾರ ದೃಢಪಟ್ಟಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









