ಮಂಗಳೂರು : ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಈಗ ಹೊಸ ತಿರುವು ಲಭಿಸಿದೆ. ಆರೋಪ ಮಾಡಿರುವ ಸುಮತಿ ನಾಯ್ಕ್ ಅವರ ವಿರುದ್ಧವೇ ಅವರ ಸ್ವಂತ ಅಕ್ಕ ಪ್ರಫುಲ್ಲ ನಾಯ್ಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುಮತಿ ನಾಯ್ಕ್ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರುವ ತಮ್ಮ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾಳೆ ಎಂದು ಪ್ರಫುಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಪ್ರಕರಣ ದಾಖಲಾಗಿದ್ದು, ಆಕೆ ಉದ್ದೇಶಪೂರ್ವಕವಾಗಿ ಹಲವು ಅಧಿಕಾರಿಗಳ ವಿರುದ್ಧ ಇಂತಹ ಸುಳ್ಳು ದೂರುಗಳನ್ನು ನೀಡುತ್ತಾ ಕಿರುಕುಳ ನೀಡುತ್ತಿದ್ದಾಳೆ ಎಂದು ಅವರು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಪ್ರಫುಲ್ಲ ನಾಯ್ಕ್, ತಮ್ಮ ವೈಯಕ್ತಿಕ ಕೌಟುಂಬಿಕ ಕಲಹದ ಸಂದರ್ಭದಲ್ಲಿ ಸುಮತಿ ಮಧ್ಯಪ್ರವೇಶ ಮಾಡಿದ್ದಳು ಎಂದು ತಿಳಿಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಗಲಾಟೆ ಮಾಡುತ್ತಿದ್ದ ಸುಮತಿಯನ್ನು ಇನ್ಸ್ಪೆಕ್ಟರ್ ಸಂದೇಶ್ ಗದರಿಸಿದ್ದರು. ಇದೇ ವೇಳೆ ಆಕೆಯ ಮಗ ವಿಡಿಯೋ ಮಾಡಲು ಮುಂದಾದಾಗ ಇನ್ಸ್ಪೆಕ್ಟರ್ ಆತನನ್ನು ತಡೆದು ಬುದ್ಧಿ ಕಲಿಸಿದ್ದರು. ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡ ಸುಮತಿ ನಾಯ್ಕ್ ಕಳೆದ ಒಂದು ವರ್ಷದಿಂದ ಹಗೆತನ ಸಾಧಿಸುತ್ತಿದ್ದು, ಸಂದೇಶ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ಇಂತಹ ಆರೋಪಗಳನ್ನು ಹೊರಿಸುತ್ತಿದ್ದಾಳೆ ಎಂದು ಪ್ರಫುಲ್ಲ ಸ್ಪಷ್ಟಪಡಿಸಿದ್ದಾರೆ.
ಸುಮತಿ ನಾಯ್ಕ್ ಅವರ ನಡವಳಿಕೆಯಿಂದಾಗಿ ಇಡೀ ಕುಟುಂಬ ಸಮಾಜದಲ್ಲಿ ತಲೆ ಎತ್ತಿ ನಡೆಯದಂತಾಗಿದೆ ಎಂದು ಪ್ರಫುಲ್ಲ ನಾಯ್ಕ್ ಅಳಲು ತೋಡಿಕೊಂಡಿದ್ದಾರೆ. ಯಾವುದೇ ಕೆಲಸವಿಲ್ಲದಿದ್ದರೂ ಬೆಂಗಳೂರಿನಲ್ಲಿ ನೆಲೆಸಿರುವ ಆಕೆ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾಳೆ. ಹಣದ ದರ್ಪದಿಂದ ತನ್ನ ಸಂಸಾರವನ್ನೂ ಹಾಳು ಮಾಡಲು ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಇನ್ಸ್ಪೆಕ್ಟರ್ ಸಂದೇಶ್ ಅವರು ಒಳ್ಳೆಯ ಅಧಿಕಾರಿಯಾಗಿದ್ದು, ನನ್ನ ಕುಟುಂಬದ ಆಂತರಿಕ ವಿಷಯದಲ್ಲಿ ಸುಮತಿ ಏಕೆ ಹಸ್ತಕ್ಷೇಪ ಮಾಡುತ್ತಿದ್ದಾಳೆ ಎಂದು ಪ್ರಶ್ನಿಸಿದ್ದೇ ಅವಳಿಗೆ ಕೋಪ ತರಿಸಿದೆ ಎಂದು ಅವರು ಘಟನೆಯ ಹಿನ್ನೆಲೆಯನ್ನು ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಕರ್ನಾಟಕ ಸಮಿತಿಯ ವರ್ತೂರು ಮಂಜುನಾಥ್, ಇನ್ಸ್ಪೆಕ್ಟರ್ ಸಂದೇಶ್ ಬಂದ ಮೇಲೆ ಮೂಡುಬಿದಿರೆಯಲ್ಲಿ ಡ್ರಗ್ಸ್ ಹಾಗೂ ಗಾಂಜಾ ಹಾವಳಿ ಕಡಿಮೆಯಾಗಿ ಶಾಂತಿ ನೆಲೆಸಿದೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾರೋ ಒಬ್ಬರು ಮಾಡಿದ ಆಧಾರರಹಿತ ಆರೋಪದ ಮೇಲೆ ದಕ್ಷ ಅಧಿಕಾರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಯಾವುದೇ ಅಸಭ್ಯ ವರ್ತನೆಗೆ ಸಾಕ್ಷ್ಯಗಳಿಲ್ಲದ ಕಾರಣ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದ್ದಾರೆ. ಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಹರೀಶ್ ಕೂಡ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









