ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ನಿರ್ದೇಶನದಂತೆ, ಜನಗಣತಿ ಕಾಯ್ದೆ-1948ರ ಅನ್ವಯ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ದೇಶದ ಮೊದಲ ಡಿಜಿಟಲ್ ಜನಗಣತಿ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಯೋಜನೆಯಡಿ ಸಾರ್ವಜನಿಕರು ತಮ್ಮ ಮನೆಯ ವಿವರಗಳನ್ನು ತಾವೇ ಖುದ್ದಾಗಿ ದಾಖಲಿಸಲು ‘ಸ್ವಯಂ ಮನೆ ಗಣತಿ’ (Self-Enumeration) ಎಂಬ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಮಾಹಿತಿ ಸಂಗ್ರಹಿಸುವ ಈ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಸಾರ್ವಜನಿಕರ ಸಕ್ರಿಯ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಈ ನಿಟ್ಟಿನಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಸಾರ್ವಜನಿಕರು ಆನ್ಲೈನ್ ಲಿಂಕ್ https://se.census.gov.in ಮೂಲಕ ಕೇವಲ 15 ರಿಂದ 20 ನಿಮಿಷಗಳಲ್ಲಿ ತಮ್ಮ ಮನೆಯ ಗಣತಿ ಕಾರ್ಯವನ್ನು ಪೂರ್ಣಗೊಳಿಸಬಹುದಾಗಿದೆ. ಆನ್ಲೈನ್ನಲ್ಲಿ ಮಾಹಿತಿ ದಾಖಲಿಸಿದ ನಂತರ ಸಾರ್ವಜನಿಕರು ‘ಸ್ವಯಂ ಗಣತಿ ಗುರುತಿನ ಸಂಖ್ಯೆ’ಯನ್ನು (Self Enumeration ID) ಪಡೆಯಲಿದ್ದಾರೆ. ತದನಂತರ ಮನೆಗಳಿಗೆ ಭೇಟಿ ನೀಡುವ ಗಣತಿದಾರರಿಗೆ ಈ ಐಡಿಯನ್ನು ಒದಗಿಸುವ ಮೂಲಕ ಜನಗಣತಿ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಿಕೊಳ್ಳಲು ಮಂಗಳೂರು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಗಣತಿಯಲ್ಲಿ ಸಂಗ್ರಹಿಸಲಾಗುವ ಸಾರ್ವಜನಿಕರ ಹೆಸರು ಮತ್ತು ಗುರುತಿನ ವಿವರಗಳನ್ನು ಕಾಯ್ದೆಯ ಪ್ರಕಾರ ಅತ್ಯಂತ ಗೌಪ್ಯವಾಗಿಡಲಾಗುವುದು. ಈ ದತ್ತಾಂಶವನ್ನು ಯಾವುದೇ ತೆರಿಗೆ ವಿಧಿಸುವ ಉದ್ದೇಶಕ್ಕಾಗಲಿ ಅಥವಾ ಪರಿಶೋಧನಾ ಕಾರ್ಯಕ್ಕಾಗಲಿ ಬಳಸಲಾಗುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿದೆ. ಸ್ವಯಂ ಗಣತಿಯಲ್ಲಿ ದಾಖಲಿಸಿದ ಮಾಹಿತಿಯ ನಿಖರತೆಯನ್ನು ಗಣತಿದಾರರು ಮತ್ತು ಮೇಲ್ವಿಚಾರಕರು ಪರಿಶೀಲಿಸಲಿದ್ದಾರೆ. ‘ವಿಕಸಿತ ಭಾರತ @ 2047’ ಅಭಿಯಾನದ ಅಡಿಪಾಯಕ್ಕೆ ಸಹಕರಿಸುವ ನಿಟ್ಟಿನಲ್ಲಿ ಮಂಗಳೂರು ತಾಲೂಕಿನ ಎಲ್ಲಾ ನಾಗರಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









