ಮಂಗಳೂರು : ವಿಶ್ವ ಹಿಂದೂ ಪರಿಷತ್ (VHP) ಮಂಗಳೂರು ಉಳ್ಳಾಲ ಪ್ರಖಂಡದ ವತಿಯಿಂದ ಹಿಂದೂ ಸಮಾಜದ ಐಕ್ಯತೆ ಮತ್ತು ಲೋಕಕಲ್ಯಾಣದ ಉದ್ದೇಶದೊಂದಿಗೆ 6ನೇ ವರ್ಷದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಪಾದಯಾತ್ರೆಯು ಏಪ್ರಿಲ್ 12, 2026ರ ಭಾನುವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಆರಂಭವಾಗಲಿದೆ. ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಹಿಂದೂ ಬಾಂಧವರು ಸಕುಟುಂಬ ಸಮೇತರಾಗಿ ಭಾಗವಹಿಸುವಂತೆ ಸಂಘಟಕರು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದ್ದಾರೆ.
ಹಿಂದು ಸನಾತನ ಸಂಸ್ಕೃತಿಯ ರಕ್ಷಣೆಗೆ ಕಟಿಬದ್ಧವಾಗಿರುವ ವಿಶ್ವ ಹಿಂದೂ ಪರಿಷದ್, ಧರ್ಮ ಮತ್ತು ದೈವಗಳ ನಂಬಿಕೆಗೆ ಅಪಚಾರವಾದಾಗ ಪ್ರತಿಭಟನೆಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ಐದು ವರ್ಷಗಳ ಹಿಂದೆ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕೃತ್ಯಗಳು ನಡೆದಾಗ, ದೈವ-ದೇವರುಗಳ ಮೇಲೆ ಭಕ್ತಿ ಮತ್ತು ಶ್ರದ್ಧೆಯನ್ನು ಮರುಸ್ಥಾಪಿಸಲು ಈ ಪಾದಯಾತ್ರೆಯನ್ನು ಆರಂಭಿಸಲಾಗಿತ್ತು. ಈಗ 6ನೇ ವರ್ಷಕ್ಕೆ ಕಾಲಿಟ್ಟಿರುವ ಈ ಪಾದಯಾತ್ರೆಯು ಕದ್ರಿ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದವರೆಗೆ ಸಾಗಲಿದ್ದು, ಜನರಲ್ಲಿ ಆಸ್ತಿಕತೆ ಹಾಗೂ ಸೌಹಾರ್ದತೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ.
ಹಿಂದೂ ವಿರೋಧಿ ಕೃತ್ಯಗಳು ದೂರವಾಗಿ, ಇಡೀ ಸಮಾಜವು ಸುಖ-ಶಾಂತಿಯಿಂದ ಇರಲಿ ಎಂಬ ಸಂಕಲ್ಪದೊಂದಿಗೆ ಈ ಸಾಮೂಹಿಕ ಪ್ರಾರ್ಥನೆ ಮತ್ತು ಪಾದಯಾತ್ರೆ ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುತ್ತಾರಿನ ಅಜ್ಜನ ಆದಿ ಸನ್ನಿಧಿಗೆ ತೆರಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









