ಮಂಗಳೂರು : ತೊಕ್ಕೊಟ್ಟು ಫ್ಲೈ ಓವರ್ ಬಳಿ ನಡೆದ ರೌಡಿ ಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಇದೀಗ ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು 24 ವರ್ಷದ ಮುಹಮ್ಮದ್ ಸುಹೈಲ್ ಅಲಿಯಾಸ್ ಚಿಯಾ ಎಂದು ಗುರುತಿಸಲಾಗಿದ್ದು, ಈತನ ಸೇರ್ಪಡೆಯೊಂದಿಗೆ ಪ್ರಕರಣದಲ್ಲಿ ಈವರೆಗೆ ಬಂಧಿತರಾದವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಆರಿಫ್ ಮೇಲೆ ನಡೆದ ಆರಂಭಿಕ ದಾಳಿಯ ಸಂಚಿನಲ್ಲಿ ಮುಹಮ್ಮದ್ ಸುಹೈಲ್ ಪ್ರಮುಖವಾಗಿ ಸಹಕರಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದ ನಂತರ ಸುಹೈಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕೊಲೆ ಕೃತ್ಯದಲ್ಲಿ ಒಟ್ಟು 15 ಮಂದಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದು ಪೊಲೀಸ್ ತನಿಖೆಯಿಂದ ಪ್ರಾಥಮಿಕವಾಗಿ ತಿಳಿದುಬಂದಿದೆ.
ಕಳೆದ ಮಾರ್ಚ್ 27ರಂದು ಮುಂಜಾನೆ ವೇಳೆ ಈ ಭೀಕರ ಹತ್ಯೆ ನಡೆದಿತ್ತು. ಬೈಕಿನಲ್ಲಿ ಸಂಚರಿಸುತ್ತಿದ್ದ ಆರಿಫ್ನನ್ನು ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಕಾರಿನಲ್ಲಿ ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈಗಾಗಲೇ 10 ಮಂದಿ ಆರೋಪಿಗಳು ಕಂಬಿ ಎಣಿಸುತ್ತಿದ್ದು, ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









