ಮಂಗಳೂರು : ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ನಡೆಸಿ ಕಳೆದ ಆರು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಪಣಂಬೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಸ್ಸಾಂನ ಕಾಚಾರ್ ಜಿಲ್ಲೆಯ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ (34) ಬಂಧಿತ ವ್ಯಕ್ತಿಯಾಗಿದ್ದು, ಈತ ಕೇರಳದ ಮಂಜೇಶ್ವರದಲ್ಲಿ ಅಡಗಿಕೊಂಡಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಈತನನ್ನು ಸೆರೆಹಿಡಿದಿದೆ.
ಈ ಪ್ರಕರಣವು 2018ರಲ್ಲಿ ನಡೆದಿದ್ದು, ಬೈಕಂಪಾಡಿಯ ಕುಡುಂಬೂರು ಎಂಬಲ್ಲಿರುವ ‘ಪೂಜಾ ಮೊಬೈಲ್ಸ್’ ಅಂಗಡಿಯ ಬೀಗ ಮುರಿದಿದ್ದ ಆರೋಪಿಯು ಸುಮಾರು ₹2.17 ಲಕ್ಷ ಮೌಲ್ಯದ ಮೊಬೈಲ್ ಫೋನ್ಗಳು, ಬಿಡಿಭಾಗಗಳು ಮತ್ತು ನಗದನ್ನು ದೋಚಿದ್ದನು. ಅಷ್ಟೇ ಅಲ್ಲದೆ ಅಂಗಡಿಯಲ್ಲಿದ್ದ ಕಂಪ್ಯೂಟರ್ಗಳನ್ನು ಜಖಂಗೊಳಿಸಿ ಹಾನಿ ಮಾಡಿದ್ದನು. ಈ ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರಂಭದಲ್ಲಿ ಬಂಧಿತನಾಗಿ ಜಾಮೀನು ಪಡೆದಿದ್ದ ಆರೋಪಿಯು, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 2018 ರಿಂದ ತಲೆಮರೆಸಿಕೊಂಡಿದ್ದನು.
ಆರೋಪಿಯು ಸತತವಾಗಿ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಣಂಬೂರು ಇನ್ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದ ತಂಡವು ಮೇ 11ರ ಸೋಮವಾರದಂದು ಮಂಜೇಶ್ವರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಾನೂನು ಪ್ರಕ್ರಿಯೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









