ಮಂಗಳೂರು : ಅನಧಿಕೃತ ಒಂಟೆ/ ಜಾನುವಾರುಗಳ ವಧೆ, ಸಾಗಾಟ ಹಾಗೂ ಅನಧಿಕೃತ ಮಾಂಸ ಮಾರಾಟವನ್ನು ತಡೆಗಟ್ಟಲು ಸೂಕ್ತ ಕ್ರಮವಹಿಸಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ.
ಅವರು ಮಂಗಳೂರು ಮಹಾನಗರಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಬಕ್ರೀದ್ ಹಬ್ಬ ಆಚರಣೆ ಸಂದರ್ಭದಲ್ಲಿ ಅನಧಿಕೃತ ಜಾನುವಾರುಗಳ ವಧೆ ಹಾಗೂ ಜಾನುವಾರು ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನುವಾರು ಸಾಗಾಣಿಕೆ ಸಮಯದಲ್ಲಿ ಪರವಾನಗಿಯನ್ನು ಕಡ್ಡಾಯವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಡೆಯಬೇಕು. ಅನಧಿಕೃತ ಜಾನುವಾರು ಸಾಗಾಣಿಕೆಯನ್ನು ತಡೆಗಟ್ಟಲು ಎಲ್ಲಾ ಚೆಕ್ಪೆÇೀಸ್ಟ್ಗಳಲ್ಲಿ ಜಾನುವಾರು ಸಾಗಾಟ ವಾಹನಗಳ ಮೇಲೆ ನಿಗಾ ವಹಿಸಬೇಕು. ಜಾನುವಾರು ಸಾಗಾಣಿಕೆ ಮಾಡುವಾಗ ಅಧಿಕೃತ ದಾಖಲೆಗಳಾದ ಪರವಾನಿಗೆ, ಜಾನುವಾರು ಮಾಲೀಕರ ವಿವರಗಳು, ಕೊಂಡುಕೊಳ್ಳುವ ಮಾಲೀಕರ ವಿವರ, ವಾಹನ ದಾಖಲಾತಿ, ಚಾಲಕರ ವಿವರ ಸೇರಿದಂತೆ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ದಾಖಲಾತಿಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಅವರು ಹೇಳಿದರು.
ಯಾವುದೇ ಕಟ್ಟಡಗಳಲ್ಲಿ ಅನಧಿಕೃತ ಪ್ರಾಣಿ ವಧೆ ಕಂಡುಬಂದಲ್ಲಿ ಅಂತಹ ಕಟ್ಟಡಗಳನ್ನು ನಿಯಮಾನುಸಾರ ಮುಟ್ಟುಗೋಲು ಹಾಕಬೇಕು. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವುದು ಮತ್ತು ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಈ ನಿಟ್ಟಿನಲ್ಲಿ ಸಮಿತಿ ಸದಸ್ಯರು ಕ್ರಮ ವಹಿಸಬೇಕು. ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ.ಅಶೋಕ್ ಕೆ.ಆರ್, ಎಎಸ್ಪಿ ಅನಿಲ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









