ಮಂಗಳೂರು : ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಳೆ, ಈ ಬಾರಿ ಮೇ ಕೊನೆಯ ವಾರದಲ್ಲೇ ಬರಬೇಕಿತ್ತಾದರೂ ಇನ್ನೂ ಕರಾವಳಿಯನ್ನು ತಲುಪಿಲ್ಲ. ಈಗಾಗಲೇ ‘ಎಲ್ ನಿನೋ’ ಪ್ರಭಾವದಿಂದಾಗಿ ಈ ವರ್ಷ ಮಳೆ ಕೊರತೆಯಾಗಬಹುದು ಎಂಬ ಆತಂಕದ ನಡುವೆ, ಮಾನ್ಸೂನ್ ಆರಂಭದಲ್ಲೇ ಕಾಣಿಸಿಕೊಂಡಿರುವ ಈ ವಿಳಂಬವು ರೈತರಲ್ಲಿ ಕಳವಳ ಮೂಡಿಸಿರುವುದು ನಿಜ. ಆದರೆ, ಸದ್ಯದ ಹವಾಮಾನ ಬದಲಾವಣೆಗಳು ಧನಾತ್ಮಕ ಮುನ್ಸೂಚನೆಯನ್ನು ನೀಡುತ್ತಿವೆ.
ಇತ್ತೀಚಿನ ವರದಿಗಳ ಪ್ರಕಾರ, ಅರಬ್ಬಿ ಸಮುದ್ರ, ಲಕ್ಷದ್ವೀಪ, ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಪ್ರಮುಖ ಭಾಗಗಳಲ್ಲಿ ಮಾನ್ಸೂನ್ ಮಾರುತಗಳು ಚುರುಕಾಗಿ ಹರಡಿಕೊಳ್ಳುತ್ತಿವೆ. ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿದ್ದ ಈ ಮಾರುತಗಳು, ಈಗ ನೈಸರ್ಗಿಕವಾಗಿಯೇ ತನ್ನ ಹಳೆಯ ವೇಗವನ್ನು ಕಂಡುಕೊಳ್ಳುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾತಾವರಣದಲ್ಲಿದ್ದ ಏರುಪೇರುಗಳು ಮತ್ತು ಸಾಗರದಲ್ಲಿದ್ದ ಪ್ರತಿಕೂಲ ಪರಿಸ್ಥಿತಿಗಳು ಈಗ ತಿಳಿಯಾಗುತ್ತಿದ್ದು, ಮುಂದಿನ 2 ರಿಂದ 3 ದಿನಗಳಲ್ಲಿ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಸೂಕ್ತ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಈ ಮಾರುತಗಳ ವ್ಯವಸ್ಥೆಯು ನೈಋತ್ಯ ಅರಬ್ಬಿ ಸಮುದ್ರದಿಂದ ಬಂಗಾಳಕೊಲ್ಲಿಯ ಮೂಲಕ ಮ್ಯಾನ್ಮಾರ್ವರೆಗೂ ಹರಡಿದ್ದು, ಹಿಂದೂ ಮಹಾಸಾಗರದಲ್ಲಿ ಬಲಗೊಳ್ಳುತ್ತಿದೆ.
ಹವಾಮಾನ ಇಲಾಖೆಯು ಈ ಮುನ್ನ ಮೇ 26ರಂದೇ ಮಾನ್ಸೂನ್ ಕೇರಳಕ್ಕೆ ಬರಲಿದೆ ಎಂದು ಅಂದಾಜಿಸಿತ್ತು. ಆದರೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ಚಂಡಮಾರುತದ ತಲ್ಲಣದಿಂದಾಗಿ ಮಾರುತಗಳ ವೇಗ ತಾತ್ಕಾಲಿಕವಾಗಿ ಕುಗ್ಗಿತ್ತು. ಇದರಿಂದಾಗಿ ಕೇರಳದಲ್ಲಿ ನಿರಂತರ ಮಳೆಯಾಗದೆ ಮಾನ್ಸೂನ್ ಆಗಮನ ತಡವಾಗಿತ್ತು. ಆದಾಗ್ಯೂ, ಈ ಸಣ್ಣ ಹಿನ್ನಡೆಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ. ಈಗಾಗಲೇ ದಕ್ಷಿಣ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸರಣಿಯನ್ನು ಆವರಿಸಿರುವ ಮಾರುತಗಳು, ಈಗ ವಾಯುವ್ಯ ದಿಕ್ಕಿನತ್ತ ವೇಗವಾಗಿ ಹೆಜ್ಜೆ ಇಡುತ್ತಿವೆ.
ಸಾಮಾನ್ಯ ವೇಳಾಪಟ್ಟಿಯಂತೆ ಜೂನ್ 27ರ ಸುಮಾರಿಗೆ ದೇಶದ ರಾಜಧಾನಿ ದೆಹಲಿಯನ್ನು ತಲುಪುವ ಮುಂಗಾರು, ಈ ಬಾರಿಯೂ ಜೂನ್ 25 ರಿಂದ 30ರ ಅವಧಿಯಲ್ಲೇ ಅಲ್ಲಿಗೆ ತಲುಪುವ ಸಾಧ್ಯತೆ ದಟ್ಟವಾಗಿದೆ. ಭಾರತದಲ್ಲಿ ಮಾನ್ಸೂನ್ ಆರಂಭದಲ್ಲಿ ನಿಧಾನವಾಗಿದ್ದರೂ, ಆನಂತರ ಹಠಾತ್ ವೇಗ ಪಡೆದುಕೊಳ್ಳುವ ಇತಿಹಾಸವಿದೆ. ಹೀಗಾಗಿ ಜೂನ್ ಮೊದಲ ವಾರದೊಳಗೆ ಈ ಮಾರುತಗಳು ಚುರುಕಾದರೆ, ದೇಶದ ಇತರ ಭಾಗಗಳಿಗೆ ನಿಗದಿತ ಸಮಯದಲ್ಲೇ ಮಳೆ ಮಾರುತಗಳು ತಲುಪಲಿವೆ ಎಂಬುದು ಹವಾಮಾನ ತಜ್ಞರ ಆಶಾವಾದವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









