ಮಂಗಳೂರು : ಯಾವಾಗಲೂ ಮೀನು ಹರಾಜಿನ ಆರ್ಭಟ, ದೋಣಿಗಳ ಇಂಜಿನ್ ಸದ್ದು ಹಾಗೂ ಲಾರಿ-ಟೆಂಪೋಗಳ ಬಿಡುವಿಲ್ಲದ ಸಂಚಾರದಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಂಗಳೂರಿನ ಧಕ್ಕೆ ಈಗ ದಿಢೀರನೆ ಮೌನಕ್ಕೆ ಶರಣಾಗಿದೆ. ವಾರ್ಷಿಕ ಮೀನುಗಾರಿಕೆಯ ಅವಧಿ ಮುಕ್ತಾಯಗೊಂಡಿರುವುದೇ ಇದಕ್ಕೆ ಕಾರಣವಾಗಿದ್ದು, ಬಂದರಿನ ಸಡಗರಕ್ಕೆ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಜೂನ್ 1ರಿಂದ ಜುಲೈ 31ರ ವರೆಗೆ ಎರಡು ತಿಂಗಳ ಕಾಲ ಯಾಂತ್ರೀಕೃತ ಮತ್ತು ಟ್ರಾಲ್ ಬೋಟ್ಗಳ ಸಮುದ್ರಯಾನಕ್ಕೆ ಸರ್ಕಾರ ಅಧಿಕೃತ ನಿಷೇಧ ಹೇರಿರುವುದರಿಂದ ಇಡೀ ಬಂದರು ಪ್ರದೇಶದಲ್ಲಿ ನೀರವ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ದಕ್ಕೆಯಲ್ಲಿ ಮೀನಿನ ಖಾಲಿ ಬಾಕ್ಸ್ಗಳನ್ನು ಜೋಡಿಸಿಡುವ ಅಂತಿಮ ಹಂತದ ಕೆಲಸಗಳು ಮಾತ್ರ ನಡೆಯುತ್ತಿದ್ದು, ಸದಾ ವಾಹನ ದಟ್ಟಣೆಯಿಂದ ಇರುತ್ತಿದ್ದ ರಸ್ತೆಗಳು ಸಂಪೂರ್ಣ ಭಾಸಿಯಾಗ ಕಣ್ಮನ ಸೆಳೆಯುತ್ತಿವೆ. ಗ್ರಾಹಕರಿಲ್ಲದ ಕಾರಣ ಬಂದರು ಆವರಣದ ಚಹಾ ಹಾಗೂ ತಿಂಡಿ ಅಂಗಡಿಗಳು ಬಾಗಿಲು ಮುಚ್ಚಿವೆ. ನಿತ್ಯ ನೂರಾರು ಬೋಟ್ಗಳು ಬಂದು ಹೋಗುತ್ತಿದ್ದ ಜೆಟ್ಟಿಯಲ್ಲಿ ಈಗ ನೂರಾರು ದೋಣಿಗಳು ಸಾಲಾಗಿ ಲಂಗರು ಹಾಕಿ ನಿಂತಿವೆ. ಒಂದನೇ ಮತ್ತು ಎರಡನೇ ಹಂತದಲ್ಲಿ ಜಾಗ ಸಾಲದೆ ಬೆಂಗ್ರೆ, ಬತ್ತೇರಿ ಹಾಗೂ ಕೂಳೂರು ಭಾಗದವರೆಗೂ ಬೋಟ್ಗಳನ್ನು ನಿಲ್ಲಿಸಲಾಗಿದ್ದು, ಮುಂದಿನ ಸೀಸನ್ಗಾಗಿ ಇವುಗಳ ದುರಸ್ತಿ ಹಾಗೂ ಬಣ್ಣ ಬಳಿಯುವ ಕಾರ್ಯ ಸದ್ದಿಲ್ಲದೆ ಆರಂಭಗೊಂಡಿದೆ.
ಇನ್ನು ಮುಂದೆ ಕರಾವಳಿ ಜನತೆಗೆ ತಾಜಾ ಮೀನಿನ ರುಚಿ ಸಿಗುವುದು ಕಷ್ಟಸಾಧ್ಯ. ಇನ್ಮುಂದೆ ಚೆನ್ನೈ ಹಾಗೂ ಗುಜರಾತ್ನಂತಹ ಹೊರರಾಜ್ಯಗಳಿಂದ ಐಸ್ನಲ್ಲಿ ಸಂರಕ್ಷಿಸಿದ ಮೀನುಗಳು ಮಂಗಳೂರಿಗೆ ಬರಬೇಕಾಗಿದ್ದು, ಇವುಗಳ ಬೆಲೆಯೂ ಗಗನಕ್ಕೇರಲಿದೆ. ಮಳೆಗಾಲದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಯಲಿದೆಯಾದರೂ, ಅದರಲ್ಲಿ ಸಿಗುವ ಮೀನಿನ ಪ್ರಮಾಣ ತೀರಾ ಕಡಿಮೆ ಇರಲಿದ್ದು, ಸ್ಥಳೀಯವಾಗಿಯೇ ಖಾಲಿಯಾಗುವುದರಿಂದ ಮಾರುಕಟ್ಟೆಗೆ ಮೀನಿನ ಕೊರತೆ ಎದುರಾಗಲಿದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಧಕ್ಕೆಯಲ್ಲಿ ಬೋಟ್ ಕಾರ್ಮಿಕರಿಂದ ಹಿಡಿದು ಲೋಡಿಂಗ್ ಕೆಲಸದವರೆಗೆ ತೊಡಗಿಸಿಕೊಂಡಿದ್ದ ಶೇ. 90ರಷ್ಟು ಮಂದಿ ಒಡಿಶಾ, ಬಿಹಾರ, ಜಾರ್ಖಂಡ್, ತಮಿಳುನಾಡು ಹಾಗೂ ಆಂಧ್ರಪ್ರದೇಶದವರಾಗಿದ್ದು, ಅವರೆಲ್ಲರೂ ಈಗ ತಂತಮ್ಮ ಸ್ವಗ್ರಾಮಗಳಿಗೆ ರೈಲು ಹತ್ತಿದ್ದಾರೆ. ಈ ಎರಡು ತಿಂಗಳ ರಜೆಯ ಅವಧಿಯಲ್ಲಿ ಮೀನುಗಾರರು ಮಾತ್ರವಲ್ಲದೆ ಐಸ್ ಫ್ಯಾಕ್ಟರಿ ನೌಕರರು, ಮೀನು ಸಾಗಾಟದ ಚಾಲಕರು ಮತ್ತು ಸಂಸ್ಕರಣಾ ಘಟಕದ ಕಾರ್ಮಿಕರು ಜೀವನೋಪಾಯಕ್ಕಾಗಿ ಪರ್ಯಾಯ ಉದ್ಯೋಗ ಹುಡುಕಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









