ಕಾಸರಗೋಡಿನ ಅದೂರು ಸಮೀಪದ ಸಂಜಕಡವು ಎಂಬಲ್ಲಿ ಜವರಾಯನ ರೂಪದಲ್ಲಿ ಬಂದ ಮಳೆ ಇಬ್ಬರು ಬಾಲಕರನ್ನು ಬಲಿಪಡೆದಿದೆ. ಕರಾವಳಿಯುದ್ದಕ್ಕೂ ಸುರಿಯುತ್ತಿರುವ ಮಳೆಗೆ ಮನೆಯೊಂದರ ಆವರಣ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ, ಆಟವಾಡುತ್ತಿದ್ದ ಒಂದೇ ಮನೆಯ ಇಬ್ಬರು ಸೋದರರು ಮೃತಪಟ್ಟು, ನೆರೆಮನೆಯ ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿರುವ ದಾರುಣ ಘಟನೆ ಸಂಜೆ 4.45 ರ ಸುಮಾರಿಗೆ ಸಂಭವಿಸಿದೆ. ಸಂಜಕಡವು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರರಾದ ಮುಸಮ್ಮಿಲ್ (14) ಮತ್ತು ಮುನ್ಸಿಲ್ (9) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಹೀಗಾಗಿ ಅದೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದ ಈ ಮಕ್ಕಳು ಬಸ್ ತಂಗುದಾಣದ ಬಳಿ ಸಮಯ ಕಳೆಯುತ್ತಿದ್ದರು. ಈ ವೇಳೆ ತಂಗುದಾಣದ ಹಿಂಭಾಗದಲ್ಲಿದ್ದ ಮನೆಯೊಂದರ ಕಾಂಪೌಂಡ್ ಗೋಡೆ ಭಾರೀ ಮಣ್ಣಿನ ಒತ್ತಡಕ್ಕೆ ಸಿಲುಕಿ ದಿಢೀರನೆ ಬಸ್ ಸ್ಟ್ಯಾಂಡ್ ಮೇಲೆ ಉರುಳಿಬಿದ್ದಿದೆ. ಕಲ್ಲು, ಮಣ್ಣು ಹಾಗೂ ಕಾಂಕ್ರೀಟ್ ರಾಶಿಯ ನಡುವೆ ಮೂವರೂ ಮಕ್ಕಳು ಸಂಪೂರ್ಣವಾಗಿ ಸಿಲುಕಿಕೊಂಡಿದ್ದಾರೆ.
ಭೀಕರ ಶಬ್ದ ಕೇಳಿ ಆತಂಕಗೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ, ಅತ್ಯಂತ ಶ್ರಮವಹಿಸಿ ಅವಶೇಷಗಳ ಅಡಿಯಲ್ಲಿದ್ದ ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ಆದರೆ ಅಷ್ಟರಲ್ಲೇ ತೀವ್ರವಾಗಿ ಜಜ್ಜಲ್ಪಟ್ಟಿದ್ದ ಮುಸಮ್ಮಿಲ್ ಹಾಗೂ ಮುನ್ಸಿಲ್ ಆಸ್ಪತ್ರೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ನೆರೆಮನೆಯ ತಾಜುದ್ದೀನ್ ಅವರ 9 ವರ್ಷದ ಮಗ ವತೀಫ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಆತನಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ದುರಂತಕ್ಕೆ ಕಾರಣವಾದ ಈ ಆವರಣ ಗೋಡೆಯನ್ನು ಇತ್ತೀಚೆಗಷ್ಟೇ ಗೃಹಪ್ರವೇಶ ಕಂಡಿದ್ದ ಹೊಸ ಮನೆಯೊಂದಕ್ಕೆ ನಿರ್ಮಿಸಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸದ್ಯ ಇಬ್ಬರು ಬಾಲಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚೆಗಾಲಾ ಸಹಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕಾಸರಗೋಡು ಜಿಲ್ಲಾದ್ಯಂತ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಹಾಗೂ ಮಕ್ಕಳು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಕೋರಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









