ಮಂಗಳೂರು : ರೈಲ್ವೇ ಲೆವೆಲ್ ಕ್ರಾಸಿಂಗ್ಗಳಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಸವಾರರ ವಿರುದ್ಧ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗವು ಕಠಿಣ ಕಾನೂನು ಕ್ರಮಗಳಿಗೆ ಮುಂದಾಗಿದೆ. ರಸ್ತೆ ಬಳಕೆದಾರರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಗೇಟ್ ಬಳಿ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿರುವುದನ್ನು ರೈಲ್ವೇ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕಳೆದ 2025 ರಲ್ಲೇ ಒಟ್ಟು 55 ಹಾಗೂ ಪ್ರಸಕ್ತ 2026 ರ ಸಾಲಿನಲ್ಲಿ ಇದುವರೆಗೆ 24 ಸೇರಿದಂತೆ ಒಟ್ಟು 79 ಅಪಘಾತ ಪ್ರಕರಣಗಳು ಈ ಭಾಗದಲ್ಲಿ ದಾಖಲಾಗಿವೆ.
ರೈಲು ಬರುವ ಮುನ್ಸೂಚನೆ ನೀಡುವ ಎಚ್ಚರಿಕೆ ಸಿಗ್ನಲ್ಗಳನ್ನು ನಿರ್ಲಕ್ಷಿಸುವುದು ಮತ್ತು ಗೇಟ್ಗಳನ್ನು ಮುಚ್ಚುತ್ತಿದ್ದರೂ ಅತಿ ಆತುರದಿಂದ ಹಳಿಗಳನ್ನು ದಾಟಲು ಯತ್ನಿಸುವುದೇ ಈ ದುರಂತಗಳಿಗೆ ಮುಖ್ಯ ಕಾರಣವಾಗಿದೆ. ಇಂತಹ ಅಪಾಯಕಾರಿ ಸಾಹಸಗಳು ಸವಾರರ ಜೀವಕ್ಕೆ ಕುತ್ತು ತರುವುದರ ಜೊತೆಗೆ ನೂರಾರು ಪ್ರಯಾಣಿಕರಿರುವ ರೈಲುಗಳ ಸುರಕ್ಷಿತ ಸಂಚಾರಕ್ಕೂ ಭಾರಿ ಧಕ್ಕೆ ತರುತ್ತಿವೆ. ಈ ಹಿನ್ನೆಲೆಯಲ್ಲಿ ನಿಯಮ ಮೀರಿ ಸಂಚರಿಸಿದ ಆರು ಮಂದಿ ವಾಹನ ಚಾಲಕರ ಚಾಲನಾ ಪರವಾನಗಿಯನ್ನು (ಡ್ರೈವಿಂಗ್ ಲೈಸೆನ್ಸ್) ಅಧಿಕಾರಿಗಳು ಮೂರು ತಿಂಗಳ ಅವಧಿಗೆ ಮುಟ್ಟುಗೋಲು ಹಾಕಿಕೊಂಡಿದ್ದು, ಇನ್ನುಳಿದ ಪ್ರಕರಣಗಳ ತನಿಖೆಯು ಪ್ರಗತಿಯಲ್ಲಿದೆ.
ಮತ್ತೊಂದೆಡೆ, ಮುಚ್ಚಿದ ಗೇಟ್ಗಳಿಗೆ ಅತಿವೇಗವಾಗಿ ವಾಹನಗಳನ್ನು ಢಿಕ್ಕಿ ಹೊಡೆಸಿ ರೈಲ್ವೇ ಇಲಾಖೆಯ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಘಟನೆಗಳನ್ನು ಇಲಾಖೆ ಹಗುರವಾಗಿ ಪರಿಗಣಿಸಿಲ್ಲ. ಇಂತಹ ಬೇಜವಾಬ್ದಾರಿ ಸವಾರರಿಂದ 2025-26ರ ಅವಧಿಯಲ್ಲಿ ಒಟ್ಟು 17,27,659 ರೂಪಾಯಿಗಳ ಬೃಹತ್ ಮೊತ್ತದ ದಂಡವನ್ನು ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಪ್ರತಿಯೊಬ್ಬರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗುತ್ತಿದ್ದು, ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಪಾಲಕ್ಕಾಡ್ ರೈಲ್ವೇ ವಿಭಾಗದ ಪ್ರಕಟಣೆ ಎಚ್ಚರಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









