ಮಂಗಳೂರು : ಮಂಗಳೂರಿನ ಹೆಮ್ಮೆಯ ನೃತ್ಯ ಪ್ರತಿಭೆ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಬಿ.ಎ. (ಇಂಗ್ಲಿಷ್ ಸಾಹಿತ್ಯ ಮತ್ತು ಇತಿಹಾಸ) ವಿದ್ಯಾರ್ಥಿನಿಯಾಗಿರುವ ಕುಮಾರಿ ರೆಮೋನಾ ಎವೆಟ್ ಪೆರೇರಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪ್ರಸಾರ ಭಾರತಿಯ ಅಧೀನಕ್ಕೆ ಒಳಪಡುವ ದೂರದರ್ಶನ ಚಂದನ ವಾಹಿನಿಯು ಆಯೋಜಿಸಿದ್ದ ಕಠಿಣ ಆಡಿಷನ್ನಲ್ಲಿ ತಮ್ಮ ಅತ್ಯುತ್ತಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ, ಅವರು ‘ಬಿ-ಗ್ರೇಡ್’ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಈ ಅಪೂರ್ವ ಸಾಧನೆಯ ಹಿಂದೆ ರೆಮೋನಾ ಅವರ ಸುದೀರ್ಘ 18 ವರ್ಷಗಳ ನಿರಂತರ ಭರತನಾಟ್ಯ ಅಭ್ಯಾಸ, ಕಠಿಣ ಪರಿಶ್ರಮ ಹಾಗೂ ಕಲೆಯ ಮೇಲಿನ ಅಪಾರವಾದ ಶ್ರದ್ಧೆಯಿದೆ. ಸೌರಭ ಸಂಗೀತ ನೃತ್ಯ ಕಲಾ ಪರಿಷತ್ನ ಖ್ಯಾತ ಗುರುಗಳಾದ ಡಾ. ಶ್ರೀವಿದ್ಯಾ ಅವರ ಮಾರ್ಗದರ್ಶನದಲ್ಲಿ ಶಿಸ್ತಿನಿಂದ ಕಲೆ ಉಜ್ಜುಗಿಸಿಕೊಂಡಿರುವ ಇವರು, ತಮ್ಮ ವಿಶಿಷ್ಟ ಕಲಾ ನೈಪುಣ್ಯತೆಯಿಂದ ಈಗಾಗಲೇ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ 2025ರ ಜುಲೈನಲ್ಲಿ ಸತತ 170 ಗಂಟೆಗಳ ಕಾಲ ಸುದೀರ್ಘ ನೃತ್ಯ ಮ್ಯಾರಥಾನ್ ನಡೆಸುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಜಾಗತಿಕ ದಾಖಲೆ ಬರೆದು ದೇಶದಾದ್ಯಂತ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದರು.
ಇದೀಗ ಭಾರತದ ಅಧಿಕೃತ ದೃಶ್ಯ ಮಾಧ್ಯಮ ಸಂಸ್ಥೆಯಾದ ದೂರದರ್ಶನದ ಮಾನ್ಯತೆ ಪಡೆದ ಕಲಾವಿದರ ಗೌರವಾನ್ವಿತ ಸಾಲಿಗೆ ಸೇರ್ಪಡೆಯಾಗಿರುವುದು, ಅವರ ಭರತನಾಟ್ಯ ಕಲಾ ಪಯಣಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ರೆಮೋನಾ ಅವರ ಈ ಹೆಮ್ಮೆಯ ಸಾಧನೆಗೆ ಅವರ ಕುಟುಂಬದವರು, ಗುರುಗಳು, ಹಿತೈಷಿಗಳು ಹಾಗೂ ಸಮಸ್ತ ಕಲಾಭಿಮಾನಿಗಳು ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ಗೌರವಗಳನ್ನು ಮುಡಿಗೇರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









