
ಮಂಗಳೂರು : ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ “ಕೊರಗಜ್ಜ” ಚಿತ್ರದ ಹಾಡುಗಳನ್ನು ಇತ್ತೀಚೆಗೆ ಝೀ ಮ್ಯೂಜಿಕ್ ಮೂಲಕ ಜಾಗತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರತಂಡವು ಸಿನಿಮಾದ ಹಾಡುಗಳಿಗೆ ಮಾತ್ರ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿತ್ತೇ ಹೊರತು, ದೈವದ ಬಗ್ಗೆ ಅಥವಾ ದೈವಾರಾಧನೆಯ ಆಚರಣೆಗಳ ಬಗ್ಗೆ ರೀಲ್ಸ್ ಮಾಡಲು ಹೇಳಿಲ್ಲ ಎಂದು ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಈ ವಿಚಾರವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ದೈವಗಳ ಕೋಲ, ನೇಮಗಳ ಸಾವಿರಾರು ವೀಡಿಯೊಗಳು ಲಭ್ಯವಿರುವಾಗ, ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಅಶ್ಲೀಲ ಅಥವಾ ಅಪಹಾಸ್ಯ ಮಾಡುವ ರೀಲ್ಸ್ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಚಿತ್ರೀಕರಣದ ಹಂತದಿಂದಲೂ ಈ ಸಿನಿಮಾ ತಂಡವು ಹತ್ತಾರು ಅಡೆತಡೆಗಳನ್ನು ಎದುರಿಸುತ್ತಾ ಬಂದಿದೆ. ಕಳಸದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ದೈವ ನರ್ತಕರೇ ಲಾಂಗು-ಮಚ್ಚುಗಳೊಂದಿಗೆ ಬಂದು ಬೆದರಿಸಿ, ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ್ದನ್ನು ಅತ್ತಾವರ್ ನೆನಪಿಸಿಕೊಂಡಿದ್ದಾರೆ. ಪದೇ ಪದೇ ‘ಕತ್ತಲೆ’ಯ ಹೆಸರಿನಲ್ಲಿ ಬೆದರಿಕೆಗಳು ಬಂದರೂ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿಯವರ ಸಮಯಪ್ರಜ್ಞೆಯಿಂದ ಪ್ರಾಣಾಪಾಯಗಳು ತಪ್ಪಿವೆ. ಸಿನಿಮಾದ ಪ್ರತಿ ಹಂತದಲ್ಲೂ ಕೆಲವರು ತೊಂದರೆ ಕೊಡುತ್ತಲೇ ಬಂದಿದ್ದಾರೆ, ಆದರೂ ಕೊರಗಜ್ಜ ದೈವದ ಆಶೀರ್ವಾದದಿಂದ ಈ ಎಲ್ಲಾ ಅಗ್ನಿ ಪರೀಕ್ಷೆಗಳನ್ನು ದಾಟಿ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.
ತುಳುನಾಡಿನ ದೈವಾರಾಧನೆಯಲ್ಲಿರುವ ಕೆಲವು ಆಚರಣೆಗಳ ಬಗ್ಗೆಯೂ ಸುಧೀರ್ ಅತ್ತಾವರ್ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕೋಲದ ಸಮಯದಲ್ಲಿ ದೈವದ ಪಾತ್ರಧಾರಿಗಳ ಬಾಯಿಯಿಂದ ಅಶ್ಲೀಲ ಅಥವಾ ಅವಾಚ್ಯ ಪದಗಳನ್ನು ಹೇಳಿಸುವ ಪದ್ಧತಿ ಇದೆ. ನಾಗರಿಕ ಸಮಾಜದಲ್ಲಿ ಸಣ್ಣ ಮಕ್ಕಳು ಮತ್ತು ಸಭ್ಯರ ಮುಂದೆ ಸಂಸ್ಕೃತಿಯ ಹೆಸರಿನಲ್ಲಿ ಇಂತಹ ಕೀಳು ಪದಗಳ ಬಳಕೆಯನ್ನು ಒಪ್ಪಲು ಸಾಧ್ಯವೇ ಎಂದು ಅವರು ಕೇಳಿದ್ದಾರೆ. ಪರಂಪರೆಯ ಹೆಸರಿನಲ್ಲಿ ದೈವಗಳಿಗೆ ಅವಹೇಳನ ಮಾಡುವುದು ಸರಿಯಲ್ಲ ಎಂಬುದು ಅವರ ವಾದವಾಗಿದೆ.
ಜಾತಿ ಪದ್ಧತಿಯ ಆಧಾರದ ಮೇಲೆ ಕೋಲದ ಸಮಯದಲ್ಲಿ ಗೌರವ ನೀಡುವ ಕ್ರಮವನ್ನು ಅವರು ಖಂಡಿಸಿದ್ದಾರೆ. ಹಿಂದೆ ಇದ್ದ ಸತಿ ಸಹಗಮನ ಅಥವಾ ವಿಧವೆಯರ ತಲೆ ಬೋಳಿಸುವ ಪದ್ಧತಿಗಳನ್ನು ಹೇಗೆ ಸಮಾಜದಿಂದ ಕಿತ್ತೊಗೆಯಲಾಗಿದೆಯೋ, ಹಾಗೆಯೇ ದೈವಾರಾಧನೆಯಲ್ಲಿರುವ ಜಾತಿ ತಾರತಮ್ಯವನ್ನೂ ತೊಡೆದುಹಾಕಬೇಕು ಎಂದು ಅತ್ತಾವರ್ ಅಭಿಪ್ರಾಯಪಟ್ಟಿದ್ದಾರೆ. ದೈವದ ಮುಂದೆ ಎಲ್ಲಾ ಜಾತಿಗಳೂ ಒಂದೇ ಆಗಿದ್ದು, ಮೇಲ್ಜಾತಿ ಅಥವಾ ಕೀಳು ಜಾತಿ ಎಂಬ ಭೇದ ದೈವದ ಪರಿಕಲ್ಪನೆಯಲ್ಲಿಲ್ಲ. ದೈವವು ತನ್ನನ್ನು ನಂಬುವ ಪ್ರತಿಯೊಬ್ಬರಿಗೂ ಇಂಬು ಕೊಡುವ ಶಕ್ತಿಯಾಗಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಮನರಂಜನೆ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









