ಮಂಗಳೂರು: ಕರಾವಳಿಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಂಜನಾಡಿಯ ಹಝ್ರತ್ ಅಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ಉರೂಸ್ ಕಾರ್ಯಕ್ರಮವು ಈ ಬಾರಿ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಉರೂಸ್ ಪ್ರಯುಕ್ತ ವಿವಿಧ ಹಿಂದೂ ಸಂಘಟನೆಗಳು ಮತ್ತು ಸ್ನೇಹ ಬಳಗಗಳು ಒಗ್ಗೂಡಿ ಮಂಜನಾಡಿ ಕೇಂದ್ರ ಮಸೀದಿಗೆ ಬೃಹತ್ ಪ್ರಮಾಣದ ‘ಹೊರೆಕಾಣಿಕೆ’ಯನ್ನು ಸಲ್ಲಿಸುವ ಮೂಲಕ ಸಹಬಾಳ್ವೆಯ ಸಂದೇಶವನ್ನು ಸಾರಿದ್ದಾರೆ.
ಭವ್ಯ ಮೆರವಣಿಗೆ: ನಿತ್ಯಾನಂದ ಸೇವಾ ಸಮಿತಿ, ಹನುಮಾನ್ ಫ್ರೆಂಡ್ಸ್ ಅಸೈಗೋಳಿ, ಟೀಮ್ ಅಸೈಗೋಳಿ, ಶಕ್ತಿ ಫ್ರೆಂಡ್ಸ್ ಆಕಾಶಭವನ, ಬರ್ಕೆ ಫ್ರೆಂಡ್ಸ್ ಕುದ್ರೋಳಿ ಹಾಗೂ ಸಾಯಿ ಫ್ರೆಂಡ್ಸ್ ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಅಸೈಗೋಳಿ ಜಂಕ್ಷನ್ನಿಂದ ಮಂಜನಾಡಿ ಕೇಂದ್ರ ಮಸೀದಿಯವರೆಗೆ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸುಮಾರು 15 ಕ್ವಿಂಟಾಲ್ ಅಕ್ಕಿ, ಸಕ್ಕರೆ, ತರಕಾರಿ ಸೇರಿದಂತೆ ವಿವಿಧ ದಿನಸಿ ಸಾಮಗ್ರಿಗಳನ್ನು ಭಕ್ತಿಯಿಂದ ಮಸೀದಿಗೆ ಅರ್ಪಿಸಲಾಯಿತು.
ಒಗ್ಗಟ್ಟಿನ ಸಂದೇಶ: ಸಾಯಿ ಫ್ರೆಂಡ್ಸ್ ಅಧ್ಯಕ್ಷ ಸುನಿಲ್ ಪೂಜಾರಿ ಅವರು ಮಾತನಾಡಿ, “ನಾವೆಲ್ಲರೂ ಸಮಾಜದಲ್ಲಿ ಒಂದಾಗಿ ಬಾಳಬೇಕು ಎಂಬ ಉದಾತ್ತ ಉದ್ದೇಶದಿಂದ ಈ ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಉರೂಸ್ ಯಶಸ್ವಿಯಾಗಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತೇವೆ” ಎಂದರು. ಅದೇ ರೀತಿ ಗಣೇಶ್ ಅಸೈಗೋಳಿ ಅವರು ಮಾತನಾಡಿ, ಮಂಜನಾಡಿ ಉರೂಸ್ಗೆ ಕಾಣಿಕೆ ನೀಡುತ್ತಿರುವುದು ಸಂತಸ ತಂದಿದೆ, ದೇವರು ನಮ್ಮ ಈ ಸೌಹಾರ್ದತೆಯನ್ನು ಹೀಗೆಯೇ ಮುಂದುವರೆಸಲಿ ಎಂದು ಹಾರೈಸಿದರು.
ಕೃತಜ್ಞತೆ ಮತ್ತು ಭಾವೈಕ್ಯತೆ: ಹಿಂದೂ ಬಾಂಧವರ ಈ ನಡೆಯನ್ನು ಮಂಜನಾಡಿ ಜುಮಾ ಮಸೀದಿ ಸಮಿತಿ ತುಂಬು ಹೃದಯದಿಂದ ಸ್ವಾಗತಿಸಿದೆ. ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಅವರು ಮಾತನಾಡಿ, “ಉರೂಸ್ ಆರಂಭವಾಗುವ ಮುನ್ನವೇ ಹಿಂದೂ ಸಹೋದರರು ಹೊರೆಕಾಣಿಕೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು, ಅದನ್ನು ನಾವು ಸಂತೋಷದಿಂದ ಸ್ವೀಕರಿಸಿದ್ದೇವೆ” ಎಂದರು. ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಅವರು ಮಾತನಾಡಿ, ಈ ಕಾರ್ಯಕ್ರಮವು ಕೇವಲ ವಸ್ತುಗಳ ನೀಡಿಕೆಯಲ್ಲ, ಬದಲಾಗಿ ನಮ್ಮ ನಡುವಿನ ಸಹೋದರತೆ ಮತ್ತು ಅಭಿಮಾನದ ಸಂಕೇತವಾಗಿದೆ ಎಂದು ಬಣ್ಣಿಸಿದರು.
ಈ ಐತಿಹಾಸಿಕ ಕ್ಷಣಕ್ಕೆ ಪ್ರದೀಪ್ ಅಸೈಗೋಳಿ, ಶ್ರೀಕಾಂತ್, ಅಶ್ರಫ್, ಹರೀಶ್ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಮತ್ತು ನೂರಾರು ಸಾರ್ವಜನಿಕರು ಸಾಕ್ಷಿಯಾದರು. ಕರಾವಳಿಯ ಮಣ್ಣಿನಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









