ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮುಲ್ಕಿಯ ಪ್ರಸಿದ್ಧ ‘ಅರಸು ಕಂಬಳ’ದಲ್ಲಿ ಬಹುಮಾನ ಗೆದ್ದ ಕೋಣಗಳ ಮಾಲಕ ಶಂಸುದ್ದೀನ್ ಅವರಿಗೆ ಹಣಕ್ಕಾಗಿ ಪೀಡಿಸಿ, ಹಲ್ಲೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈ ಮೂಲದ ಉದ್ಯಮಿಯೊಬ್ಬರ ತೋಟ, ಗದ್ದೆ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿರುವ ಶಂಸುದ್ದೀನ್ ಅವರ ಮನೆಗೆ ನುಗ್ಗಿದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಆರೋಪಿಗಳಾದ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಎಂಬುವವರು ಶಂಸುದ್ದೀನ್ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಇತ್ತೀಚೆಗೆ ನಡೆದ ಕಂಬಳದಲ್ಲಿ ಶಂಸುದ್ದೀನ್ ಅವರ ಕೋಣಗಳು ಜಯಗಳಿಸಿದ್ದು, ಬಹುಮಾನವಾಗಿ ಚಿನ್ನದ ಸರ ಲಭಿಸಿತ್ತು. ಇದನ್ನೇ ಗುರಿಯಾಗಿಸಿಕೊಂಡ ಆರೋಪಿಗಳು, “ನೀನು ದನಗಳನ್ನು ಕಡಿಯಲು ಕೊಡುತ್ತೀಯಲ್ಲವೇ?” ಎಂದು ಆಕ್ಷೇಪಾರ್ಹವಾಗಿ ಪ್ರಶ್ನಿಸಿ, ಹಫ್ತಾ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಬಹುಮಾನವಾಗಿ ಬಂದ ಹಣ ಮತ್ತು ಚಿನ್ನದ ಸರವನ್ನು ನೀಡಬೇಕೆಂದು ಒತ್ತಾಯಿಸಿ ಹಲ್ಲೆಗೆ ಮುಂದಾಗಿದ್ದಾರೆ.
ಆರೋಪಿಗಳು ಹಲ್ಲೆಗೆ ಮುಂದಾದಾಗ ಸ್ಥಳೀಯ ನಿವಾಸಿಗಳು ಕೂಡಲೇ ಧಾವಿಸಿ ಬಂದು ಶಂಸುದ್ದೀನ್ ಅವರ ರಕ್ಷಣೆಗೆ ನಿಂತಿದ್ದಾರೆ. ಸ್ಥಳೀಯರ ಪ್ರತಿರೋಧಕ್ಕೆ ಹೆದರಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳಾದ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಮತ್ತು ಸುವೀನ್ ಕಾಂಚನ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









